ಟೆಕ್ಕಿ ಸ್ವಾತಿಯನ್ನು ಕೊಲ್ಲಲು ಇಚ್ಛಿಸಿರಲಿಲ್ಲ : ಆರೋಪಿ ರಾಮ್ ಕುಮಾರ್

ಚೆನ್ನೈ,ಜುಲೈ 5: ಐಟಿ ಉದ್ಯೋಗಿ ಎಸ್.ಸ್ವಾತಿಯನ್ನು ಕೊಲೆಗೈದ ಪ್ರಕರಣದಲ್ಲಿ ಬಂಧಿತನಾದ ಆರೋಪಿ ರಾಮ್ ಕುಮಾರ್‌ನಿಗೆ ಈ ತಿಂಗಳು 18ರವರೆಗೆ ಜ್ಯುಡಿಷಿಯಲ್ ಕಸ್ಟಡಿ ವಿಧಿಸಲಾಗಿದೆ. ಪೊಲೀಸರಿಂದ ಬಂಧಿಸಲ್ಪಡುವುದು ಖಚಿತವಾದಾಗ ತನ್ನ ಕೊರಳನ್ನು ಕೊಯ್ದು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಆರೋಪಿ ಈಗ ಸುಧಾರಿಸಿಕೊಂಡಿದ್ದಾನೆ. ಚೆನ್ನೈ ಎಗ್ಮೋರ್ 14ನೆ ನಂಬರ್ ಮೆಟ್ರೋಪಾಲಿನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನ್ಯಾಯಾಧೀಶ ಗೋಪಿನಾಥ್ ಆಸ್ಪತ್ರೆಗೆ ಬಂದು ರಿಮಾಂಡ್ ಮುಂತಾದ ಕ್ರಮಗಳನ್ನು ಪೂರ್ತಿಗೊಳಿಸಿದ್ದಾರೆ.
ಈಗ ಮಾತಾಡುವುದಕ್ಕೆ ಸಮರ್ಥನಾದ್ದರಿಂದ ಮ್ಯಾಜಿಸ್ಟ್ರೇಟ್ ಆರೋಪಿಯಿಂದ ವಿವರವಾದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಸ್ವಾತಿ ಹತ್ಯೆ ಮಾಡಿದ ಘಟನೆಯನ್ನು ವಿವರಿಸುವ ವೇಳೆ ರಾಮ್ ಕುಮಾರ್ ಅತ್ತಿದ್ದಾನೆ. ಕೊಲೆಗೈಯ್ಯುವುದು ತನ್ನ ಇಚ್ಛೆಆಗಿರಲಿಲ್ಲ. ಸ್ವಾತಿ ತನಗೆ ಫೇಸ್‌ಬುಕ್ ಮೂಲಕ ಪರಿಚಿತಳಾಗಿದ್ದಳು. ಅವಳನ್ನು ತಾನು ಪ್ರೀತಿಸುತ್ತಿದ್ದೆ. ಅವಳೊಡನೆ ಪ್ರೇಮ ನಿವೇದನೆ ಮಾಡಿಕೊಂಡ ಬಳಿಕ ಅವಳು ತನ್ನಿಂದ ದೂರವಾಗಿದ್ದಳು. ಹಲವು ಬಾರಿ ಅವಳೊಂದಿಗೆ ಪ್ರೀತಿಯನ್ನು ಹೇಳಿಕೊಂಡರೂ ಆಗಲ್ಲಾ ಎಂದು ವ್ಯಂಗವಾಗಿ ಉತ್ತರಿಸುತ್ತಿದ್ದಳು. ಆದ್ದರಿಂದ ಕೋಪಗೊಂಡು ಗಾಯಗೊಳಿಸಿ ಪ್ರತೀಕಾರ ತೀರಿಸಬೇಕೆಂದು ಬಯಸಿದ್ದೆ ಎಂದು ರಾಮ್‌ಕುಮಾರ್ ಮ್ಯಾಜಿಸ್ಟ್ರೇಟರ್‌ಗೆ ಹೇಳಿಕೆ ನೀಡಿದ್ದಾನೆ. ಆರೋಪಿ ವಕೀಲರನ್ನು ನೇಮಿಸಿಕೊಳ್ಳಲು ಆರ್ಥಿಕವಾಗಿ ಅಸಮರ್ಥನಾದ್ದರಿಂದ ತನಗೆ ಕಾನೂನು ನೆರವು ನೀಡುವಂತೆ ಕೋರ್ಟ್‌ನ್ನು ವಿನಂತಿಸಿಕೊಂಡಿದ್ದಾನೆ.
ಗುಣಮುಖನಾಗುತ್ತಿರುವುದರಿಂದ ಪೊಲೀಸರು ಕಸ್ಟಡಿಗೆ ಕೇಳಿದ್ದಾರೆ. ವೈದ್ಯರ ವರದಿ ಅನುಕೂಲಕರವಾದೊಡನೆ ಪೊಲೀಸ್ ಕಸ್ಟಡಿಗೆ ನೀಡುವ ಸಾಧ್ಯತೆ ಇದೆ.





