ಬಿಳಿನೆಲೆ-ತಿಮ್ಮಡ್ಕ ರಸ್ತೆ: ಸ್ಥಳೀಯರಿಂದ ಶ್ರಮದಾನ

ಕಡಬ, ಜು.5 : ತೀರಾ ಹದಗೆಟ್ಟು ಮಳೆಗಾಲದಲ್ಲಿ ಅಲ್ಲಲ್ಲಿ ಕೆಸರುಮಯವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದ ಬಿಳಿನೆಲೆ ಬೈಲು-ತಿಮ್ಮಡ್ಕ ರಸ್ತೆಯನ್ನು ಶನಿವಾರದಂದು ಸ್ಥಳೀಯರು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು.
ಈ ರಸ್ತೆಯ ಮೂಲಕ ಬಿಳಿನೆಲೆ ಬೈಲು, ಒಗ್ಗು, ತಿಮ್ಮಡ್ಕ, ಎರ್ಕ ಮೂಲಕ ಬೊಟ್ಟಡ್ಕ ಕೆಂಜಾಳ ಪ್ರದೇಶಗಳಿಂದ ಬಿಳಿನೆಲೆ ಬೈಲು, ಬಿಳಿನೆಲೆ ಶಾಲೆಗಳಿಗೆ ಹೋಗಲು ಶಾಲಾ ಮಕ್ಕಳು ಹರ ಸಾಹಸ ಪಡುತ್ತಿದ್ದ ಹಿನ್ನಲೆಯಲ್ಲಿ ಗ್ರಾಮಸ್ಥರಾದ ಸನತ್ ಕುಮಾರ್ ಹಾಗೂ ವಿಜಯ ಕುಮಾರ್ ಎರ್ಕರವರ ನೇತೃತ್ವದಲ್ಲಿ ನೂರಾರು ಮಂದಿ ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡು ರಸ್ತೆಯ ಇಕ್ಕಡೆಯಲ್ಲಿ ಗಿಡಗಂಟಿಗಳನ್ನು ಕಡಿದು ರಸ್ತೆಯ ಗುಂಡಿಗಳಿಗೆ ಚರಳುಮಿಶ್ರಿತ ಮರಳು ಹಾಕಿ, ರಸ್ತೆಯ ಇಕ್ಕಡೆಯಲ್ಲಿ ಚರಂಡಿಗಳನ್ನು ತೆಗೆದರು.
ಶ್ರಮದಾನಕ್ಕೆ ಚಾಲನೆ ನೀಡಿದ ಸನತ್ ಕುಮಾರ್ ರವರು ಮಾತನಾಡಿ, ಈ ರಸ್ತೆಯು ತೀವ್ರ ಹದಗೆಟ್ಟಿದ್ದು ನಾವು ಪ್ರತಿ ವರ್ಷ ಶ್ರಮದಾನದ ಮೂಲಕ ರಸ್ತೆಯನ್ನು ಸರಿಪಡಿಸುತ್ತಿದ್ದೇವೆ, ಆದರೂ ಪ್ರತಿ ವರ್ಷ ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದ ಕೂಡಿರುತ್ತದೆ, ಈ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹುಡುಕುವ ವಿಚಾರದಲ್ಲಿ ಇಲ್ಲಿನ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ತಂದು ಬಿಳಿನೆಲೆಯಿಂದ ಪುತ್ತಿಲ ಬೈಲಡ್ಕದವರೆಗೆ ಸುಮಾರು 3 ಕಿ.ಮೀ ರಸ್ತೆಯನ್ನು ಡಾಮರೀಕರಣಗೊಳಿಸಬೇಕೆಂದು ಅವರು ಆಗ್ರಹಿಸಿದರು.
ನಾಗರಿಕ ಅಭಿವೃದ್ದಿ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಎರ್ಕರವರು ಮಾತನಾಡಿ, ಈ ರಸ್ತೆಯನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸೇರಿಸಿ ರಸ್ತೆಯನ್ನು ಅಗಲೀಕರಣಗೊಳಿಸಬೇಕು. ಈಗಾಗಲೇ ಗ್ರಾ,ಪಂ.ನವರು, ಸುಬ್ರಹ್ಮಣ್ಯ ಮಠದವರು ಅಲ್ಲದೆ ಸ್ಥಳೀಯ ಬಾಬು ಎಂಬವರು ಸಹಾಯ ಮಾಡಿದ್ದಾರೆ. ಇನ್ನು ಮುಂದೆಯಾದರೂ ಈ ರಸ್ತೆಯನ್ನು ಡಾಮರೀಕರಣಗೊಳಿಸುವಲ್ಲಿ ಶ್ರಮ ವಹಿಸಬೇಕು ಎಂದು ಹೇಳಿ ಶ್ರಮದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಶ್ರಮದಾನದಲ್ಲಿ ಪುತ್ತಿಲ ಬೈಲಡ್ಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಗುಡ್ಡಪ್ಪ ಗೌಡ ಪ್ರಮುಖರಾದ ಸತೀಶ್ ಎರ್ಕ, ಭಾಸ್ಕರ ಗೌಡ ತಿಮ್ಮಡ್ಕ, ದಿನೇಶ್ ಗೌಡ, ವೆಂಕಟರಮಣ ಹೊಸಹೊಕ್ಲು, ಧರ್ಮಪಾಲ ಗೌಡ ತಿಮ್ಮಡ್ಕ, ನೀಲಪ್ಪ ಗೌಡ ತಿಮ್ಮಡ್ಕ, ನಾರಾಯಣ ಪಾಟಾಳಿ, ಕೇಶವ ಒಗ್ಗು, ದಯಾನಂದ ಕಾಯಾರ್ಗ, ಲಿಂಗಪ್ಪ ಗೌಡ ಪುರಿಕರ ಗುಡ್ಡೆ, ಮಂಚ ಮುಗೇರ, ಉಮೇಶ್ ತಿಮ್ಮಡ್ಕ, ಪೂವಮ್ಮ ತಿಮ್ಮಡ್ಕ, ಸರಸ್ವತಿ ತಿಮ್ಮಡ್ಕ, ಸರಸ್ವತಿ ತಿಮ್ಮಡ್ಕ, ಕೃಷ್ಣಪ್ರಸಾದ್ ಬೈಲು, ಪುರುಷೊತ್ತಮ ಬಲ್ಯ ಬೈಲು, ಚೆನ್ನಪ್ಪ ತಿಮ್ಮಡ್ಕ, ಚೆನ್ನಪ್ಪ ಮಾಲಾಜೆ, ಹಿರಿಯಣ್ಣ ಗೌಡ, ರತ್ನಾಕರ ಗೌಡ ಬೈಲು, ಗಿರಿಯಪ್ಪ ಗೌಡ ಚಿದ್ಗಲ್, ಹರೀಶ್ ಪುರಿಕೆರೆಗುಡ್ಡೆ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.







