ಇಂಡೊನೇಷ್ಯ ಆತ್ಮಾಹುತಿ ದಾಳಿಯಲ್ಲಿ ಶಂಕಿತ ಉಗ್ರನೊಬ್ಬನ ಸಾವು

ಜಕಾರ್ತ, ಜು.5: ಸೊಲೊ ನಗರದ ಪೊಲೀಸ್ ಮುಖ್ಯ ಕಾರ್ಯಾಲಯದ ಎದುರು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಒಬ್ಬ ಶಂಕಿತ ಉಗ್ರ ಮೃತಪಟ್ಟಿದ್ದಾನೆಂದು ಇಂಡೊನೇಷ್ಯ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಕಾಲಮಾನ ಪ್ರಾತಃಕಾಲ 7.30 ಕ್ಕೆ ಈ ದಾಳಿ ನಡೆದಿದ್ದು ಒಬ್ಬ ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.
ದಾಳಿ ನಡೆದ ಸ್ಥಳದಲ್ಲಿ ಸ್ಫೋಟಕಗಳೇನಾದರೂ ಉಳಿದಿವೆಯೇ ಎಂದು ತಿಳಿಯಲು ಪೊಲೀಸರು ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆಂದು ಸೆಂಟ್ರಲ್ ಜಾವಾ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಕೊಂಡ್ರೊ ಕಿರೊನೊ ಹೇಳಿದ್ದಾರೆ.
ಪೊಲೀಸ್ ಹಾಗೂ ಸುರಕ್ಷಾ ಪಡೆಗಳನ್ನು ಗುರಿಯಾಗಿಸಿ ಈ ಉಗ್ರ ದಾಳಿ ನಡೆದಿದೆಯೆಂದು ನಂಬಲಾಗಿದೆ ಎಂದು ಅವರು ಹೇಳಿದ್ದಾರೆ. ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮೊಟಾರ್ ಸೈಕಲ್ ಹಾಗೂ ರಸ್ತೆ ಕೂಡ ಹಾನಿಗೀಡಾಗಿರುವುದು ಟಿವಿಯಲ್ಲಿ ಬಿತ್ತರಗೊಳ್ಳುತ್ತಿರುವ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ.
Next Story





