ರಾಫ್ಟಿಂಗ್ ಮೂಲಕ ಸಂಚಾರಿ ನಿಯಮಗಳ ಜಾಗೃತಿ ಮೂಡಿಸಿದ ಶಿವಮೊಗ್ಗ ಎಸ್ಪಿ!

ಶಿವಮೊಗ್ಗ, ಜು.5: ತಮ್ಮ ನೇರನಿರ್ಭೀಡ ಕಾರ್ಯವೈಖರಿಯ ಮೂಲಕ ’ಟ್ರಬಲ್ ಶೂಟರ್’ ಐಪಿಎಸ್ ಅಧಿಕಾರಿ ಎಂಬ ಬಿರುದಿಗೆ ಪಾತ್ರರಾಗಿರುವ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಮಂಗಳವಾರ ಮತ್ತೊಂದು ಸಾಹಸ ಮಾಡಿದ್ದಾರೆ. ಮೈದುಂಬಿ ಹರಿಯುತ್ತಿರುವ, ಪ್ರವಾಹದ ಭೀತಿ ಸೃಷ್ಟಿಸಿರುವ ತುಂಗಾ ನದಿಯಲ್ಲಿ ’ರಿವರ್ ರಾಫ್ಟಿಂಗ್’ ನಡೆಸುವ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ವಿಭಿನ್ನ ಸಾಹಸ ಕಾರ್ಯ ಮಾಡಿದ್ದಾರೆ.
ಹೊರವಲಯ ಮತ್ತೂರು ಗ್ರಾಮದಿಂದ ಆರಂಭವಾದ ’ರಾಫ್ಟಿಂಗ್’ ಸಾಹಸವು ನಗರದ ಕೋಟೆ ರಸ್ತೆ ಸಮೀಪದ ಕೋರ್ಪಳಯ್ಯನ ಛತ್ರದ ಬಳಿ ಅಂತ್ಯಗೊಂಡಿತು. ಈ ವೇಳೆ ಸಾರ್ವಜನಿಕರು ಎಸ್ಪಿ ಸೇರಿದಂತೆ ’ರಾಫ್ಟಿಂಗ್’ ಸಾಹಸದಲ್ಲಿ ಭಾಗಿಯಾಗಿದ್ದವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಸಂಚಾರಿ ನಿಯಮಗಳ ಬಗ್ಗೆ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾಹಸ ಅಕಾಡೆಮಿ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಈ ’ರಾಫ್ಟಿಂಗ್’ ಸಾಹಸ ಆಯೋಜಿಸಲಾಗಿತ್ತು. ಸುಮಾರು 10 ಜನರಿದ್ದ ತಂಡವು 7 ಕಿ.ಮೀ.ವರೆಗೆ ನದಿಯಲ್ಲಿ ರಾಫ್ಟಿಂಗ್ ನಡೆಸಿ, ನಾಗರೀಕರ ಗಮನ ಸೆಳೆಯುವ ಕೆಲಸ ಮಾಡಿತು.
ಸಂಚಾರಿ ನಿಯಮಗಳ ಬಗ್ಗೆ ವಿಭಿನ್ನವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ರಾಫ್ಟಿಂಗ್ ಸಾಹಸ ನಡೆಸಲಾಯಿತು. ನಿಜಕ್ಕೂ ಇದೊಂದು ವಿಭಿನ್ನ ಅನುಭವ ನೀಡಿತು ಎಂದು ಎಸ್ಪಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ. ’ಈ ಹಿಂದೆ ನರ್ಮದಾ ಹಾಗೂ ಗಂಗಾ ನದಿಗಳಲ್ಲಿಯೂ ರಾಫ್ಟಿಂಗ್ ನಡೆಸಿದ್ದೆ. ಇದರಿಂದ ತುಂಗಾ ನದಿಯಲ್ಲಿ ‘ರಾಫ್ಟಿಂಗ್ ನಡೆಸುವುದು ಸುಲಭವಾಯಿತು. ಹೊಸ ಅನುಭವ ನೀಡಿತು. ಈ ಸಾಹಸಕ್ಕೆ ಕೈಜೋಡಿಸಿದ ಪ್ರತಿಯೋರ್ವರಿಗೆ ಧನ್ಯವಾದ ಅರ್ಪಿಸುವುದಾಗಿ ಎಸ್ಪಿ ಹೇಳಿದರು. ’ಸಂಚಾರಿ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾವುನೋವುಗಳು ಸಂಭವಿಸುತ್ತಿವೆ. ಪ್ರತಿಯೋರ್ವ ನಾಗರಿಕರು ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಮಾಡಬೇಕು. ವಾಹನ ಸಂಚಾರದ ವೇಳೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಬಾರದು’ ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ರಾಪ್ಟಿಂಗ್ ಸಾಹಸದಲ್ಲಿ ಭಾಗಿಯಾಗಿದ್ದ ಜಿಲ್ಲಾ ವಾರ್ತಾಧಿಕಾರಿ ಹೀಮಂತರಾಜು ಮಾತನಾಡಿ, ’ತುಂಬಿ ಹರಿಯುತ್ತಿರುವ ತುಂಗಾ ನದಿಯಲ್ಲಿ ರಾಫ್ಟಿಂಗ್ ನಡೆಸಿದ್ದು ನಿಜಕ್ಕೂ ತಮ್ಮ ಜೀವನದಲ್ಲಿ ಮರೆಯಲಾಗದ ರೋಚಕ ಅನುಭವಗಳಲ್ಲೊಂದಾಗಿದೆ. ಈ ರೀತಿಯ ಸಾಹಸ ಕಾರ್ಯಗಳು ನಮ್ಮಲ್ಲಿ ಹೊಸ ರೀತಿಯ ಆತ್ಮವಿಶ್ವಾಸ ಮೂಡಿಸುತ್ತವೆ. ಯುವಕರಿಗೆ ಸ್ಪೂರ್ತಿಯಾಗಿದೆ’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಏನಿದು ’ರಿವರ್ ರಾಫ್ಟಿಂಗ್’ ಸಾಹಸ...?
ಜಲ ಕ್ರೀಡೆಗಳಲ್ಲಿ ’ರೀವರ್ ರಾಫ್ಟಿಂಗ್’ ಅತ್ಯಂತ ರೋಚಕಭರಿತವಾದುದಾಗಿದೆ. ರಬ್ಬರ್ ಟ್ಯೂಬ್ ಗಳಿಂದ ತಯಾರಿಸಿದ ಬೋಟ್ ಮಾದರಿಯ ವಸ್ತುವಿಗೆ ರಾಫ್ಟಿಂಗ್ ಎಂದು ಕರೆಯಲಾಗುತ್ತದೆ. ಹಳ್ಳಿಗರು ಬಳಸುವ ತೆಪ್ಪದಲ್ಲಿ ಮಾದರಿಯಲ್ಲಿ ಇದು ಇರುತ್ತದೆ. ಮಳೆಗಾಲದ ವೇಳೆ ಮೈದುಂಬಿ ಹರಿಯುವ ನದಿ, ಹೊಳೆಗಳಲ್ಲಿ ಜಲ ಸಾಹಸಿಗರು ರಾಫ್ಟಿಂಗ್ ನಡೆಸುತ್ತಾರೆ. ಇದೊಂದು ರೋಚಕ ಸಾಹಸವಾಗಿದೆ. ಕೊಂಚ ಹೆಚ್ಚುಕಡಿಮೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ.







