ಉಡುಪಿ ಖಾಝಿಯವರ ಈದ್ ಸಂದೇಶ

ಮುಸ್ಲಿಂ ಜಗತ್ತು ಅತ್ಯಂತ ಸಂತೋಷದಿಂದ ಹಂಚಿಕೊಳ್ಳುವ ಒಂದು ಹಬ್ಬವಾಗಿದೆ ಈದುಲ್ ಫಿತರ್. ಈ ಹಬ್ಬಗಳು ಸತ್ಯವಿಶ್ವಾಸಿಗಳಿಗೆ ಅಲ್ಲಾಹು ನೀಡಿದ ಮಹಾ ಅನುಗ್ರಹವಾಗಿದೆ. ಇದು ರಮಝಾನ್ ಎಂಬ ಪುಣ್ಯ ತಿಂಗಳು. ನಮ್ಮಿಂದ ವಿದಾಯ ಹೇಳುವಾಗ ಸತ್ಯ ವಿಶ್ವಾಸಿಯ ಮನಸ್ಸು ದುಃಖಿಸುತ್ತದೆ. ವಿರಹ ವೇದನೆ ಅನುಭವಿಸುತ್ತದೆ. ಇದಕ್ಕಾಗಿ ಅಲ್ಲಾಹನು ನಮಗೆ ನೀಡಿದ ಸಿಹಿ ಸಿಂಚನವಾಗಿದೆ ಹಬ್ಬ.
ಹೊಸ ಬಟ್ಟೆಬರೆಗಳನ್ನು ಧರಿಸಿ, ಕುಟುಂಬ ಬಾಂಧವ್ಯವನ್ನು ಬೆಸೆದು ಪರಸ್ಪರ ಸಂತೋಷದಿಂದ ಕೂಡಿ ಬಾಳುವುದನ್ನು ಪವಿತ್ರ ಇಸ್ಲಾಂ ಧರ್ಮವು ಪುಣ್ಯ ಕರ್ಮವಾಗಿ ಕಂಡಿದೆ. ಹಬ್ಬದ ದಿನ ಉಪವಾಸ ಆಚರಿಸುವುದು ಹರಾಂ ಆಗಿದೆ. ರಮಝಾನ್ ತಿಂಗಳಲ್ಲಿ ಮಾಡಿದ ಆರಾಧನೆ ಇತರ ತಿಂಗಳಲ್ಲೂ ಮಾಡಲು ನಾವು ತಯಾರಾಗಬೇಕು.ರಮಝಾನ್‌ನಲ್ಲಿ ಕೆಡುಕಿನಿಂದ ದೂರವಾದಂತೆ ಇತರ ತಿಂಗಳಲ್ಲೂ ಅದು ಸಾಧ್ಯವಾಗಬೇಕು. ಪ್ರವಾದಿ (ಸ.ಅ.) ಹೇಳುತ್ತಾರೆ. ಹಬ್ಬದ ದಿನ ನನ್ನಲ್ಲಿ ಏನು ಬೇಕಾದರೂ ಕೇಳಿ. ಅಲ್ಲಾಹು ಅದನ್ನು ನೀಡದೆ ಇರಲಾರನು.
ಈದ್ ಹಬ್ಬ ಸಂಭ್ರಮದ ಜೊತೆಯಲ್ಲಿ ಆಧ್ಯಾತ್ಮಿಕತೆಯನ್ನು ಮತ್ತು ದೀನೀ ಶಿಷ್ಟಾಚಾರಗಳನ್ನು ಮರೆಯಬಾರದು. ಹಬ್ಬದ ಹೆಸರಲ್ಲಿ ಎಲ್ಲಾ ಮಿತಿಮೀರಿ ವರ್ತಿಸುವುದು ಮತ್ತು ದೇವಕ್ರೋಧಕ್ಕೊಳಗಾಗುವುದು, ಅನಾಚಾರಗಳಲ್ಲಿ ತೊಡಗುವುದು, ಯಾವುದು ಕೂಡಾ ಇರಬಾರದು. ಸಂಭ್ರಮದ ನಡೆ ದೇವ ಸಂಪ್ರೀತಿಯನ್ನು ಸಂಪಾದಿಸಲು ಸಾಧ್ಯವಾಗಬೇಕು. ಯಾವುದೇ ಧರ್ಮದವರಿಗೂ, ಅಲ್ಲದವರಿಗೂ ನಮ್ಮಿಂದ ಅಥವಾ ಹಬ್ಬದಿಂದ ತೊಂದರೆಗೀಡಾಗುವುದು ಸಲ್ಲದು. ಕುಟುಂಬ, ನೆರೆಹೊರೆ, ಎಲ್ಲರೂ ದೇವ ಸಂಪ್ರೀತಿಯಿಂದ ಇರುವಂತಾಗಲಿ.







