ಎರ್ಮಾಳು, ಮೂಳೂರಿನಲ್ಲಿ ತೀವ್ರಗೊಂಡ ಕಡಲ್ಕೊರೆತ

ಪಡುಬಿದ್ರೆ, ಜು.5: ಇಲ್ಲಿಗೆ ಸಮೀಪದ ಎರ್ಮಾಳು ಬಡಾ ಹಾಗೂ ಕಾಪು ಸಮೀಪದ ಮೂಳೂರಿನಲ್ಲಿ ಮಂಗಳವಾರ ಕಡಲ್ಕೊರೆತ ತೀವ್ರಗೊಂಡಿದೆ.
ತೆಂಗಿನ ಮರಗಳು ಕಡಲ ಒಡಲು ಸೇರುತ್ತಿದ್ದು, ಬೃಹತ್ ಗಾತ್ರದ ಕಲ್ಲುಗಳಿಗೆ ಅಪ್ಪಳಿಸುತ್ತಿದ್ದು, ಅಪಾಯದ ಸ್ಥಿತಿಯಲ್ಲಿದೆ. ಸಮೀಪದಲ್ಲೇ ಮನೆಗಳಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ. ಬಡಾ ಎರ್ಮಾಳಿನ ಮೀನುಗಾರಿಕಾ ರಸ್ತೆಯಂಚಿನಲ್ಲಿರುವ ಕಲ್ಯಾಣಿ ಧನಂಜ್ ಕರ್ಕೇರ ಹಾಗೂ ಇಲಿಯಾಸ್ ಎಂಬವರ ಮನೆಗಳು ಕಡಲ ಅಬ್ಬರಕ್ಕೆ ಸಿಲುಕುವ ಅಪಾಯ ಎದುರಿಸುತ್ತಿವೆ.
ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದರೂ ಅದು ಅವೈಜ್ಞಾನಿಕ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ. ಹೊಂಡ ನಿರ್ಮಿಸಿ ಅದಕ್ಕೆ ಬಂಡೆ ಕಲ್ಲುಗಳನ್ನು ಹಾಕಿ ಸಮರ್ಪಕವಾಗಿ ತಡೆಗೋಡೆ ನಿರ್ಮಿಸ ಬೇಕಾಗಿದ್ದರೂ ಈ ಬಾರಿ ಮಾತ್ರ ಕಡಲತೀರದಲ್ಲಿ ಬೃಹತ್ ಮರಳ ದಿಬ್ಬಗಳನ್ನು ನಿರ್ಮಿಸಿ ಅದರ ಮೇಲೆ ಕಲ್ಲುಗಳನ್ನು ಜೋಡಿಸಲಾಗಿದೆ. ಆದರೆ ಆ ಅವೈಜ್ಞಾನಿಕ ಕಾಮಗಾರಿ ಸಮುದ್ರದ ತೆರೆ ಅಪ್ಪಳಿಸಿದ ಸಂದಭರ್ ಅದರ ಅಡಿಭಾಗದ ಮಣ್ಣು ಕಡಲಿಗೆ ಜಾರುತ್ತಿದ್ದಂತೆ ಅದರೊಂದಿಗೆ ಕಲ್ಲುಗಳೂ ಕಡಲ ಒಡಲು ಸೇರುತ್ತಿದೆ ಎಂದು ಆರೋಪಿಸಿದ್ದಾರೆ.





