ಉಡುಪಿ ಬಿಷಪ್ ರ ಈದ್ ಸಂದೇಶ

ಪವಿತ್ರ ರಮಝಾನ್‌ನಲ್ಲಿ ಅನ್ನಾಹಾರ, ದೇಹೇಚ್ಛೆಗಳನ್ನು ತ್ಯಾಗ ಮಾಡಿ ನಿರ್ಮಲ ದೇಹ, ಮನಸ್ಸು ಹಾಗೂ ಹೃದಯದಿಂದ ಭಗವಂತನಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಪವಿತ್ರ ಈದುಲ್ ಫಿತ್ರ್ ಆಚರಿಸುವ ಎಲ್ಲ ಮುಸ್ಲಿಮ್ ಸೋದರ-ಸೋದರಿಯರಿಗೆ ಉಡುಪಿ ಕ್ರೈಸ್ತ ಕೆಥೊಲಿಕ್ ಧರ್ಮಕ್ಷೇತ್ರದ ಎಲ್ಲ ಕೆಥೊಲಿಕ್ ಕ್ರೈಸ್ತರ ಪರವಾಗಿ ಹಬ್ಬದ ಹಾರ್ದಿಕ ಶುಭಾಶಯಗಳು.
ರಮಝಾನ್ ಉಪವಾಸ ಆಚರಣೆಯ ಜತೆಜತೆಗೆ ತಮ್ಮ ಆದಾಯದ ಸ್ವಲ್ಪಭಾಗವನ್ನು ಬಡವರಿಗೆ ದಾನ ನೀಡುವುದು, ಎಷ್ಟೇ ಬಡವರಾಗಿದ್ದರೂ ರಮಝಾನ್ ತಿಂಗಳಲ್ಲಿ ಮನೆಯೆದುರು ಬರುವ ಯಾರೇ ಬಡವರನ್ನೂ ಬರಿಗೈಯಲ್ಲಿ ಕಳುಹಿಸದೆ ಅವರಿಗೆ ಕೈಲಾದ ಸಹಾಯವನ್ನು ಮಾಡುವುದು ನಿಜವಾಗಿಯೂ ಈ ಹಬ್ಬದ ಮಾನವೀಯ ಮುಖವನ್ನು ತೋರಿಸುತ್ತದೆ.
ಮನಸ್ಸಿನ ಶುದ್ಧೀಕರಣಕ್ಕಾಗಿ ಈ ಮಾಸದಲ್ಲಿ ನಿತ್ಯವೂ ಐದು ಬಾರಿ ಪ್ರಾರ್ಥನೆ ಸಲ್ಲಿಸಿ, ದುಶ್ಚಟಗಳ ಸಹವಾಸದಿಂದ ದೂರವಿದ್ದು ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ನಿಯಂತ್ರಿಸಿ ದೇಹ ಮತ್ತು ಆತ್ಮ ಶುದ್ಧೀಕರಣ ಮಾಡಿಕೊಳ್ಳುವುದರಿಂದ ಸ್ವ-ನಿಯಂತ್ರಣ ಹಾಗೂ ಶಿಸ್ತಿನ ಜೀವನಕ್ಕೆ ನಾಂದಿ ಹಾಡಿದಂತಾಗುವುದು ಮಾತ್ರವಲ್ಲ, ಆಧ್ಯಾತ್ಮಿಕವಾಗಿ ಭಗವಂತನ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ.
ಸಹಬಾಳ್ವೆ, ಶಾಂತಿ, ಸೌಹಾರ್ದ, ಇತರರ ಒಳಿತು, ಸಾಮಾಜಿಕ ಕಳಕಳಿಯನ್ನು ಜಾಗೃತಗೊಳಿಸುವ ರಮಝಾನ್ ಆಚರಣೆಯಲ್ಲಿ ಮುಸ್ಲಿಮ್ ಸಮುದಾಯ ಭಾಗಿಯಾಗಿದ್ದು, ಇತರ ಸಮಾಜದ ಜನರಿಗೂ ಅವರ ಆಚರಣೆ ಮಾದರಿಯಾಗಿದೆ. ಈ ಹಬ್ಬವು ಎಲ್ಲಾ ಮುಸ್ಲಿಮ್ ಬಾಂಧವರಲ್ಲಿ ನವ ಜೀವನಸ್ಫೂರ್ತಿಯನ್ನು ತುಂಬಲಿ. ಎಲ್ಲಾ ಮಾನವರು ಒಂದೇ ಕುಟುಂಬವಾಗಿ, ಸಂವಾದ, ಸಹಕಾರ, ಐಕ್ಯತೆ, ಶಾಂತಿ ಹಾಗೂ ನ್ಯಾಯವನ್ನು ಪ್ರತಿಪಾದಿಸಲು ದೇವರು ನಮ್ಮನ್ನೆಲ್ಲಾ ಒಂದುಗೂಡಿಸಲಿ. ಶಾಂತಿ ಸಮಾಧಾನ ನಮ್ಮೆಲ್ಲರಲ್ಲಿ ನೆಲೆಸಲಿ.







