ಮೂಡುಬಿದಿರೆ: ಅಕ್ರಮ ಕಸಾಯಿಖಾನೆಗೆ ದಾಳಿ: ಓರ್ವನ ಬಂಧನ

ಮೂಡುಬಿದಿರೆ, ಜು.5: ಪಡುಮಾರ್ನಾಡು ಗ್ರಾ.ಪಂ ವ್ಯಾಪ್ತಿಯ ಮೂಡುಮಾರ್ನಾಡು ಗ್ರಾಮದ ಪರಂಬುಲ ಎಂಬಲ್ಲಿರುವ ಅಕ್ರಮ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸರು ಮಂಗಳವಾರ ಸಾಯಂಕಾಲ ದಾಳಿ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಮೂರು ಜೀವಂತ ಗಂಡು ಕರು, ಹೋರಿ, ಕೃತ್ಯಕ್ಕೆ ಬಳಸಿದ ಬೈಕ್, ಹೋರಿ ಕಡಿದಿರುವ ತ್ಯಾಜ್ಯಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಹುಸೇನ್ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದ ಮೂವರು ಆರೋಪಿಗಳಾದ ಗುಂಡುಕಲ್ಲಿನ ನವಾಲ್, ರಮೀಜ್, ಇಕ್ಬಾಲ್ ಪರಾರಿಯಾಗಿದ್ದಾರೆ.
ಆರೋಪಿ ಹುಸೇನ್ ಸ್ಥಳೀಯ ವ್ಯಕ್ತಿಯೊಬ್ಬರ ನಾಲ್ಕು ಎಕರೆ ಜಾಗದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ. ಜೊತೆಗೆ ಊರಿನ ಕೋಳಿಯ ವ್ಯಾಪಾರಸ್ಥನಾಗಿದ್ದು, ಇದರ ಜೊತೆಗೆ ಮನೆಯಲ್ಲೇ ಅಕ್ರಮ ಕಸಾಯಿಖಾನೆ ನಿರ್ಮಿಸಿದ್ದ ಎನ್ನಲಾಗಿದೆ. ಈ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಸ್ಥಳೀಯರ ದನಗಳು ಕಣ್ಮರೆಯಾದ ಹಿನ್ನೆಲೆಯಲ್ಲಿ ಈತನ ಮೇಲೆ ಸಂಶಯ ಉಂಟಾಗಿತ್ತು. ಈ ಕುರಿತು ಸಾರ್ವಜನಿಕರು ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಮೂಡುಬಿದಿರೆ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.







