ಆತ್ಮನಿಯಂತ್ರಣದ ದೀಕ್ಷೆ ತೊಡುವ ಈದ್

ಒಂದು ತಿಂಗಳ ಉಪವಾಸ ವ್ರತಕಾಲದ ಸಮಾರೋಪವಾಗಿ ಮುಸ್ಲಿಂ ಜಗತ್ತಿಗೆ ಈದುಲ್ ಫಿತ್ರ್ ಆಗಮಿಸಿದೆ. ಈದುಲ್ ಫಿತ್ರ್ ಅಂದರೆ ‘ತೊರೆ ಹಬ್ಬ’. ಒಂದು ತಿಂಗಳ ಉಪವಾಸ ವ್ರತವನ್ನು ತೊರೆಯುವ ಸಂಭ್ರಮದ ದಿನ. ‘ಈದ್’ ಎಂಬ ಅರಬಿ ಪದಕ್ಕೆ ‘ಮರಳುವುದು’ ಎಂಬರ್ಥವಿದೆ. ಮತ್ತೆ ಮತ್ತೆ ಮರಳುವ ಕಾರಣಕ್ಕೆ ಹಬ್ಬವನ್ನು ಈದ್ ಎಂದು ಕರೆಯಲಾಗುತ್ತದೆ. ಆದರೆ, ಇದಕ್ಕಿಂತ ಸತ್ವಪೂರ್ಣವಾದ ಇನ್ನೊಂದು ಅರ್ಥವಿದೆ. ರಮಝಾನಿನಲ್ಲಿ ಮೈಗೂಡಿಸಿಕೊಂಡ ಸಜ್ಜನಿಕೆ, ಆಧ್ಯಾತ್ಮಿಕತೆಗೆ ಮರಳುವುದು.
ಹಿಜಿರಾ ಕ್ಯಾಲೆಂಡರಿನ ಒಂಬತ್ತನೆ ತಿಂಗಳಾದ ರಮಝಾನ್ ಮುಸಲ್ಮಾನನ ಬದುಕನ್ನು ಬಹುದೊಡ್ಡ ಬದಲಾವಣೆಗೆ ಒಡ್ಡುವ ಮಾಸ. ಆಹಾರ ಪಾನೀಯಗಳನ್ನು, ಕಾಮವಾಂಛೆಗಳನ್ನು, ಸುಖಲೋಲುಪತೆಗಳನ್ನೆಲ್ಲ ತ್ಯಜಿಸಿ, ಸೃಷ್ಟಿಕರ್ತ-ಸಂರಕ್ಷಕನಾದ ಅಲ್ಲಾಹನ ಧ್ಯಾನದಲ್ಲಿ ಕಳೆಯುವ ಕಾಲ. ಆ ಮಾಸದ ಹಗಲಿನಲ್ಲಿಡೀ ಮುಸ್ಲಿಮರು ಕಠಿಣವಾದ ಉಪವಾಸವನ್ನು ಆಚರಿಸುತ್ತಾರೆ. ಆ ಮೂಲಕ ದೇವ ಸಾಮಿಪ್ಯವನ್ನು ಬಯಸುತ್ತಾರೆ. ‘ಉಪವಾಸ’ ಎಂಬ ಕನ್ನಡ ಪದವೇ ಇಸ್ಲಾಂ ಪ್ರತಿಪಾದಿಸುವ ‘ಉಪವಾಸ’ವನ್ನು ಚೆನ್ನಾಗಿ ಒಳಗೊಂಡಿದೆ. ‘ಉಪ’ ಅಂದರೆ ನಿಕಟ (ಉಪಾಧ್ಯಕ್ಷ-ಅಧ್ಯಕ್ಷನಿಗೆ ನಿಕಟ), ‘ವಾಸ’ ಅಂದರೆ ವಾಸಿಸು. ಅರ್ಥಾತ್ ಅಲ್ಲಾಹ್‌ನಿಗೆ ನಿಕಟನಾಗಿ ವಾಸಿಸುವುದೇ ಉಪವಾಸದ ಉದ್ದೇಶ.
ಮನುಷ್ಯನೆಂದರೆ ದೇಹವಲ್ಲ, ಆತ್ಮ. ದೇಹವು ಆತ್ಮ ವಾಸಿಸುವುದಕ್ಕಿರುವ ಕವಚವಷ್ಟೆ. ಆತ್ಮವು ಅದರಿಂದ ಬೇರ್ಪಟ್ಟಾಗ ಮನುಷ್ಯನನ್ನು ಆತನಿಗಿದ್ದ ಹೆಸರಿನಿಂದ ಕರೆಯುವುದಿಲ್ಲ. ಬದಲು ಮಯ್ಯಿತ್, ಶವ, ಪಾರ್ಥಿವ ಶರೀರ, ಡೆಡ್‌ಬಾಡಿ ಇತ್ಯಾದಿಯಾಗಿ ಕರೆಯಲಾಗುತ್ತದೆ. ಈ ಜಡವು ಮಣ್ಣಿನಲ್ಲಿ ಲೀನವಾಗಬಹುದು. ಆದರೆ ಆತ್ಮಕ್ಕೆ ಸಾವಿಲ್ಲ. ಮರಣೋತ್ತರ ಬದುಕಿನಲ್ಲಿ ಪಾಪಪುಣ್ಯಗಳ ಆಧಾರದಲ್ಲಿ ಅದು ಕಷ್ಟ-ಸುಖಗಳನ್ನು ಅನುಭವಿಸಬೇಕಾಗುತ್ತದೆ.
ವಾಸ್ತವದಲ್ಲಿ ಮನುಷ್ಯನನ್ನು ಮುನ್ನಡೆಸುವುದೇ ಈ ಆತ್ಮ. ದೇಹವು ವಾಹನವಾದರೆ ಆತ್ಮ ಅದರ ಚಾಲಕ. ಆತ್ಮ ಚೆನ್ನಾಗಿದ್ದರೆ ದೇಹವನ್ನದು ಸರಿದಾರಿಯಲ್ಲಿ ಸಾಗಿಸುತ್ತದೆ. ಆತ್ಮ ಕೆಟ್ಟರೆ ದೇಹವನ್ನು ದಾರಿಗೆಡಿಸುತ್ತದೆ. ಆತ್ಮವನ್ನು ಸಮರ್ಥ ಚಾಲಕನನ್ನಾಗಿ ಪಳಗಿಸುವ ಪ್ರಯತ್ನವೇ ರಮಝಾನಿನ ಉಪವಾಸಾದಿ ಉಪಾಸನೆಗಳು.
ದೈವಿಕ ಪ್ರೇರಣೆ ಮತ್ತು ಪೈಶಾಚಿಕ ಪ್ರೇರಣೆ ಎಂಬೆರಡು ವಿರುದ್ಧ ಶಕ್ತಿಗಳು ಆತ್ಮವನ್ನು ಪ್ರಭಾವಿಸುತ್ತವೆ. ಪೈಶಾಚಿಕ ಪ್ರೇರಣೆಯನ್ನು ಸೋಲಿಸಿ ದೈವಿಕ ಪ್ರಭಾವಕ್ಕೊಳಗಾಗುವಂತೆ ಆತ್ಮವನ್ನು ತರಬೇತುಗೊಳಿಸುವುದಕ್ಕೆ ಅತ್ಯುತ್ತಮ ದಾರಿಯಾಗಿ ಉಪವಾಸವನ್ನು ಕಾಣಲಾಗುತ್ತದೆ. ತುಂಬಿದ ಹೊಟ್ಟೆಯು ದೇಹದಲ್ಲಿ ಪೈಶಾಚಿಕ ಪ್ರಭಾವವನ್ನು ದಟ್ಟಗೊಳಿಸಿದರೆ, ಹಸಿವು ಅದನ್ನು ನಿಯಂತ್ರಿಸುತ್ತದೆ. ಅತಿಕಾಯವು ಆಲಸ್ಯ, ಅತಿನಿದ್ರೆ, ಅಸ್ಥಿರ ಚಿತ್ತಕ್ಕೆ ಕಾರಣವಾದರೆ, ನಿಯಂತ್ರಿತ ದೇಹವು ಕರ್ಮೋತ್ಸುಕವಾಗಿರುತ್ತದೆ. ಆ ಕಾರಣಕ್ಕಾಗಿಯೇ ರಮಝಾನಿನಲ್ಲಿ ಮನುಷ್ಯ ಎಂದಿಗಿಂತ ಸಜ್ಜನನಾಗಿರುತ್ತಾನೆ. ಪರನಿಂದೆ, ಪರಪೀಡೆ, ಸುಳ್ಳು, ವಂಚನೆ ವಗೈರೆಗಳಿಂದ ವಿಮುಖನಾಗಿ ದೇವಸ್ಮರಣೆ, ಪರೋಪಕಾರ, ದಾನಧರ್ಮಾದಿ ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾನೆ. ಧಾರ್ಮಿಕತೆಯಲ್ಲಿ ಅಷ್ಟೇನೂ ಕರ್ಮಠನಲ್ಲದ ಕನಿಷ್ಠ ಮುಸಲ್ಮಾನ ಕೂಡಾ ರಮಝಾನಿನಲ್ಲಿ ಪರಿಶುದ್ಧನಾಗಲು, ಗರಿಷ್ಠ ಪ್ರಾಮಾಣಿಕನಾಗಲು ಪ್ರಯತ್ನಿಸುತ್ತಾನೆ. ರಮಝಾನ್ ಮುಗಿದ ಮರುದಿನ ಬರುವ ಈದುಲ್ ಫಿತ್ರ್‌ನ ದಿನವೂ ಅದೇ ಪರಿಶುದ್ಧಿಗೆ ಮರಳಬೇಕೆಂಬ ಸಂದೇಶವನ್ನು ‘ಈದ್’ ನೀಡುತ್ತದೆ.
ರಮಝಾನಿನಲ್ಲೂ ಯಾರು ಪರಿಶುದ್ಧರಾಗಲು ಪ್ರಯತ್ನಿಸುವುದಿಲ್ಲವೋ, ಉಪವಾಸ, ನಮಾಝ್, ಧ್ಯಾನಾದಿ ಉಪಾಸನೆಗಳ ಮೂಲಕ ದೇವಭಕ್ತಿ ಪ್ರಕಟಿಸುವುದಿಲ್ಲವೋ ಅಂತಹವರು ಈದ್ ಆಚರಣೆಗೆ ಅರ್ಹರಾಗುವುದಿಲ್ಲ. ಏಕೆಂದರೆ, ಈದ್ ರಮಾಝಾನಿನಲ್ಲಿ ತಮ್ಮನ್ನು ತಾವು ದುಡಿಸಿಕೊಂಡವರಿಗೆ ಸಲ್ಲುವ ಸನ್ಮಾನ ಸಮಾರಂಭ ತಿಂಗಳಿಡೀ ಹಗಲು ಉಣ್ಣದವರು ಅಂದು ಉಂಡುಟ್ಟು ಸಂಭ್ರಮಿಸಬೇಕು. ಸುಖಾಸ್ವ್ಪಾದನೆಗಳನ್ನು ಕೈ ಬಿಟ್ಟವರು ಅಂದು ಖುಷಿ ಪಡಬೇಕು. ಹಬ್ಬದ ದಿನ ಉಣ್ಣದೆ ಉಪವಾಸವಿರುವುದು ನಿಷಿದ್ಧ.
ಹಬ್ಬಾಚರಣೆಯೂ ಆರಾಧನೆ
ಆರಾಧನೆ ಎನ್ನುವುದು ಸಾಂಪ್ರದಾಯಿಕವಾದ ಕೆಲವು ಆಚರಣೆಗಳಿಗಷ್ಟೇ ಇಸ್ಲಾಂ ಸೀಮಿತಗೊಳಿಸುವುದಿಲ್ಲ. ಬದುಕಿನ ಸಹಜ ಅಗತ್ಯಗಳನ್ನೆಲ್ಲ ಪೂರೈಸುವುದೂ ಆರಾಧನೆಯೆ. ತನ್ನ ಮತ್ತು ಆಶ್ರಿತರ ಹೊಟ್ಟೆಯ ಹಸಿವನ್ನು ನ್ಯಾಯಯುತ ದಾರಿಯಲ್ಲಿ ತಣಿಸಬೇಕೆಂಬ ಇರಾದೆಯೊಂದಿಗೆ ಯಾವುದೇ ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದೂ ಒಂದು ಆರಾಧನೆ. ನಮಾಝ್‌ಗಾಗಿ ಮಸೀದಿಗೆ ತೆರಳುವಂತೆ ಕೃಷಿ ಬೆಳೆಸಲು ಗದ್ದೆ, ತೋಟಗಳಿಗೆ ಸಾಗುವುದೂ ಆರಾಧನೆ. ರಮಝಾನ್‌ನಲ್ಲಿ ವ್ರತಾಚರಿಸುವುದು ಹೇಗೋ, ಹಾಗೆಯೇ ಈದ್ ದಿನ ತಿಂದುಂಡು ಸಂಭ್ರಮಿಸುವುದೂ ಆರಾಧನೆ. ಧರ್ಮಸಮ್ಮತ ಕೆಲಸಗಳೆಲ್ಲವನ್ನೂ ಆರಾಧನೆಯಾಗಿ ಪರಿವರ್ತಿಸಲು ಇಸ್ಲಾಂ ಅವಕಾಶವೊದಗಿಸುತ್ತದೆ. ಪ್ರಾಮಾಣಿಕವಾಗಿ ನಡೆಸುವ ವ್ಯಾಪಾರ ಪುಣ್ಯಕಾರ್ಯವಾದರೆ, ಧರ್ಮ ಸಮ್ಮತವಲ್ಲದ ಮದ್ಯ ವ್ಯಾಪಾರ ಪಾಪಕೃತ್ಯವೆನಿಸುತ್ತದೆ.
ಹಬ್ಬಾಚರಣೆ ಕೂಡಾ ಪಾಪಪುಣ್ಯಗಳ ಪರಿಯಿಂದ ಹೊರತಾಗಿರುವುದಿಲ್ಲ. ಅಲ್ಲಾಹು ಅನುಮತಿಸದ ಯಾವೊಂದು ಕೂಡಾ ಈದ್‌ನಂದು ಸಮ್ಮತಾರ್ಹವಾಗಿ ಬಿಡುವುದಿಲ್ಲ. ಈದ್ ಪಾರ್ಟಿಯ ಹೆಸರಲ್ಲಿ ಮದ್ಯಪಾನ ಮಾಡುವುದಕ್ಕೋ ಇತರರಿಗೆ ಕಿರುಕುಳ ಕೊಡುವುದಕ್ಕೋ ಅವಕಾಶವಿಲ್ಲ. ಧರ್ಮ ವಿಶ್ವಾಸಿಯ ಮಟ್ಟಿಗೆ ಖುಷಿಯ ಸಂದರ್ಭವಿರಲಿ, ದುಃಖದ ಸ್ಥಿತಿಯಿರಲಿ ಅಲ್ಲಾಹನ ಶಾಸನಗಳಿಗೆ ಬದ್ಧನಾಗಿಯೇ ಬದುಕಬೇಕು. ಹಬ್ಬದ ನೆಪದಲ್ಲಿ ಸ್ವೇಚ್ಛಾಚಾರವನ್ನು ಧರ್ಮವು ಅನುಮತಿಸುವುದಿಲ್ಲ.
ಈದ್ ಹೇಗಿರಬೇಕು
ಈದ್‌ನಂದು ಸ್ನಾನ ಮಾಡಿ, ಹೊಸ ಉಡುಗೆ ತೊಟ್ಟು, ಸುಗಂಧ ಹಚ್ಚಿ ಸುಂದರರಾಗುವುದು, ಪುರುಷರು ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ನಡೆಸುವುದು, ರುಚಿಕರ ಆಹಾರ ತಯಾರಿಸಿ ಉಣ್ಣುವುದು, ಅತಿಥಿಗಳಿಗೆ ಉಣ ಬಡಿಸುವುದು, ಕುಟುಂಬ ಸಂಬಂಕರನ್ನು ಸಂದರ್ಶಿಸುವುದು, ಶುಭಾಶಯ ವಿನಿಮಯ ಮಾಡುವುದು, ಬಡವರಿಗೆ ಧಾನ್ಯ ದಾನ ಮಾಡುವುದು ಈದ್ ದಿನದ ಪ್ರಮುಖ ಆಚರಣೆಗಳು.
ಊರಿನ ಮುಖ್ಯ ಆಹಾರ ಧಾನ್ಯವನ್ನು ಬಡವರಿಗೆ ನೀಡುವ ಕಡ್ಡಾಯ ದಾನವನ್ನು ಝಕಾತುಲ್ ಫಿತ್ರ್ ಎನ್ನಲಾಗುತ್ತದೆ. ಈದ್‌ನ ಹಗಲು ರಾತ್ರಿಗೆ ತನಗೂ ತನ್ನ ಆಶ್ರಿತರಿಗೂ ಖರ್ಚಿಗೆ ಬೇಕಾದುದಕ್ಕಿಂತ ಹೆಚ್ಚಿನದ್ದನ್ನು ಹೊಂದಿರುವ ಪ್ರತಿಯೊಬ್ಬರೂ ತಲಾ 2.6 ಕಿ.ಗ್ರಾಂನಷ್ಟು ಧಾನ್ಯವನ್ನು ದಾನ ನೀಡಬೇಕು. ಈ ಮೂಲಕ ಹಬ್ಬ ಉಳ್ಳವರ ಆಚರಣೆಯಾಗದೆ ಎಲ್ಲರ ಆಚರಣೆಯಾಗುವಂತೆ ನೋಡಿಕೊಳ್ಳಲಾಗಿದೆ.
ಒತ್ತಡದ ಬದುಕಿನ ಭರದಲ್ಲಿ ಕುಟುಂಬ ಸಂಬಂಧಗಳು ಅಗಲುತ್ತಿರುವಾಗ ಹಬ್ಬದ ನೆಪದಲ್ಲಾದರೂ ಅವುಗಳನ್ನು ಹತ್ತಿರಕ್ಕೆ ತರುವ ಪ್ರಯತ್ನ ಈದ್‌ನಂದು ನಡೆಯಬೇಕು. ಆದಾಗ್ಯೂ ಕೆಲವರು ವೈಯಕ್ತಿಕ ಲಾಭಕ್ಕಾಗಿ ಅಕಾರಿಗಳು, ಗಣ್ಯವ್ಯಕ್ತಿಗಳನ್ನು ಭೇಟಿಯಾಗಿ ಸಿಹಿತಿಂಡಿ ಹಂಚಲು, ಅವರ ಒಲವುಗಳಿಸಲು ಈ ದಿನವನ್ನು ಬಳಸುವ ಮೂಲಕ ಕುಟುಂಬ ಸಂಬಂಗಳನ್ನು ಮರೆಯುವುದುಂಟು. ಸ್ನೇಹ, ಸಂತೋಷ, ಸೌಹಾರ್ದಗಳ ಹಬ್ಬವಾದ ಈದ್‌ನ ದಿನವನ್ನು ಕೂಡಾ ಈ ರೀತಿ ವ್ಯಾಪಾರೀಕರಣ ಗೊಳಿಸುವುದು ವಿಪರ್ಯಾಸ.
‘‘ಅಲ್ಲಾಹು ಅಕ್ಬರ್’’ ಎನ್ನುವುದು ಈದ್ ದಿನದ ಮಂತ್ರಘೋಷ. ಅಲ್ಲಾಹು ದೊಡ್ಡವನು ಎಂದು ಸಾರುವ ಈ ಘೋಷ ವಾಕ್ಯವು ಮನುಷ್ಯನನ್ನು ನಿಯಂತ್ರಿಸುವ ದಿವ್ಯಶಕ್ತಿ ಹೊಂದಿದೆ. ಖುಷಿಯಿಂದ ಬೀಗುವುದಕ್ಕೋ, ದುಃಖದಿಂದ ಬಾಗುವುದಕ್ಕೋ ಅವಕಾಶವಿಲ್ಲ. ಎಲ್ಲವನ್ನೂ ವಿಸುವ ಅಲ್ಲಾಹನೇ ದೊಡ್ಡವನು ಎನ್ನುವ ತಕ್ಬೀರ್‌ನ ತತ್ವ ಜನಮನಸ್ಸುಗಳಲ್ಲಿ ಬೇರೂರಿ ಬಿಟ್ಟರೆ ಮನುಷ್ಯ ಮಿತಿಮೀರಲಾರ. ರಮಝಾನ್ ತಿಂಗಳಿಡೀ ಕೈಗೊಂಡ ಆಧ್ಯಾತ್ಮಿಕ ತಪದ ಆತ್ಮಚೈತನ್ಯವನ್ನು ಒಂದೇ ದಿನದಲ್ಲಿ ಗಾಳಿಗೆ ತೂರಲಾರ.
ಆತ್ಮನಿಯಂತ್ರಣದ ವಿಷಯದಲ್ಲಿ ಬದುಕನ್ನಿಡೀ ರಮಝಾನಿನಂತೆ ಮಾಡಿಕೊಂಡರೆ, ಬದುಕಿನ ಅಂತ್ಯವನ್ನು ಹಬ್ಬದಂತೆ ಸಂಭ್ರಮಿಸಬಹುದು.









