ಮೋದಿ ಟೀಮ್‌ನ ನೂತನ ಸದಸ್ಯರು...
ಹೊಸದಿಲ್ಲಿ,ಜು.5: ಪುನಾರಚಿತ ಕೇಂದ್ರ ಸಂಪುಟಕ್ಕೆ ಮಂಗಳವಾರ ಸೇರ್ಪಡೆಗೊಂಡ 19 ಮಂದಿ ನೂತನ ಸಚಿವರ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಪಿ.ಪಿ.ಚೌಧುರಿ: ರಾಜಸ್ಥಾನದ ಪಾಲಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿರುವ 63 ವರ್ಷ ವಯಸ್ಸಿನ ಪಿ.ಪಿ.ಚೌಧುರಿ, ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. 1961ರಲ್ಲೇ ಬಾಲ ಸ್ವಯಂಸೇವಕರಾಗಿ ಆರೆಸ್ಸೆಸ್‌ಗೆ ಸೇರ್ಪಡೆಗೊಂಡಿದ್ದರು. ಎನ್‌ಡಿಎ ಸರಕಾರ ಜಾರಿಗೊಳಿಸಲು ಪ್ರಯತ್ನಿಸುತ್ತಿರುವ ವಿವಾದಾತ್ಮಕ ಭೂ ಸ್ವಾಧೀನ ವಿಧೇಯಕವನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯ ಸದಸ್ಯರಾಗಿದ್ದರು. ಆದರೆ ಆನಂತರ ಆ ಹುದ್ದೆಯನ್ನ್ನು ತ್ಯಜಿಸಿದ್ದರು. ಹಲವು ದಶಕಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ್ದ ಅವರು 11 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ವಾದಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಸಂಸದನಾಗಿ ತನ್ನ ವೇತನದಿಂದಲೇ ಕ್ಷೇತ್ರದ 1.31 ಲಕ್ಷ ಮಹಿಳೆಯರಿಗೆ ವಿಮಾ ಸೌಲಭ್ಯವನ್ನು ಒದಗಿಸಿದ್ದಾರೆ.
ಎಸ್.ಎಸ್.ಅಹ್ಲುವಾಲಿಯಾ: ದಾರ್ಜಿಲಿಂಗ್‌ನ ಲೋಕಸಭಾ ಸದಸ್ಯರಾದ ಅಹ್ಲುವಾಲಿಯಾ (65) ಹಿರಿಯ ರಾಜಕಾರಣಿ. ನ್ಯಾಯವಾದಿಯಾದ ಇವರು ಸಂಸದೀಯ ಕಾನೂನುಗಳ ಪರಿಣಿತರು. ಹಿಂದಿನ ಯುಪಿಎ ಸರಕಾರದ ಆಡಳಿತದಲ್ಲಿ ಅವರು ರಾಜ್ಯ ಸಭೆಯ ಉಪಪ್ರತಿಪಕ್ಷ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಎಂ.ಜೆ. ಅಕ್ಬರ್: ಪತ್ರಿಕಾ ಸಂಪಾದಕ ಹುದ್ದೆಯನ್ನು ತೊರೆದು ರಾಜಕೀಯಕ್ಕಿಳಿದ ಮುಬಶ್ಶಿರ್ ಜಾವೇದ್ ಅಕ್ಬರ್ (65), ಇತ್ತೀಚೆಗೆ ಜಾರ್ಖಂಡ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇಂದು ಸಂಪುಟಕ್ಕೆ ಸೇರ್ಪಡೆಯಾದ ಏಕೈಕ ಮುಸ್ಲಿಂ ಇವರಾಗಿದ್ದಾರೆ.
ಅನುಪ್ರಿಯಾ ಪಟೇಲ್: ಉತ್ತರಪ್ರದೇಶದ ಕುರ್ಮಿ ಪಂಗಡದ ನಾಯಕ ಸೋನೆ ಲಾಲ್ ಪಟೇಲ್‌ರ ಪುತ್ರಿ ಯಾದ ಅನುಪ್ರಿಯಾ (35) ಉತ್ತರ ಪ್ರದೇಶದ ಮಿರ್ಝಾಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಎನ್‌ಡಿಎ ಒಕ್ಕೂಟದ ಮಿತ್ರಪಕ್ಷ ವಾದ ಅಪ್ನಾದಳ್‌ನ ನಾಯಕಿ. ಅನುಪ್ರಿಯಾ ಅವರು ಅಪ್ನಾದಳ್ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಗೊಳಿಸಿರುವುದಾಗಿ ವರದಿಯಾಗಿವೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಪುರುಷೋತ್ತಮ್ ರೂಪಾಲಾ: 61ರ ಹರೆಯದ ರೂಪಾಲಾ ಅವರು ಪ್ರಧಾನಿ ಮೋದಿಯ ತವರು ರಾಜ್ಯದ ಸಂಸದ. ಪ್ರಧಾನಿಯ ನಿಕಟವರ್ತಿಯೆಂದೇ ಗುರುತಿಸಲ್ಪಟ್ಟಿದ್ದಾರೆ.
ಮಹೇಂದ್ರ ಪಾಂಡೆ: ಉತ್ತರಪ್ರದೇಶದ ಚೌಂಡೌಲಿ ಲೋಕಸಭಾ ಕ್ಷೇತ್ರದ ಸಂಸದರಾದ ಮಹೇಂದ್ರ ಪಾಂಡೆ (58) ಪುನಾರಚಿತ ಸಂಪುಟದ ಬ್ರಾಹ್ಮಣ ಮುಖ ವಾಗಿದ್ದಾರೆ. ಎರಡು ಅವಧಿಗೆ ಬಿಜೆಪಿ ಶಾಸಕರಾಗಿದ್ದ ಅವರು, ಇದೇ ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದಾರೆ. ಪಿಎಚ್‌ಡಿ ಪದವಿ ಹೊಂದಿರುವ ಏಕೈಕ ಸಚಿವ.
ವಿಜಯ್ ಗೋಯಲ್: ನಾಲ್ಕು ಅವಧಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಗೋಯೆಲ್ (62), ದಿಲ್ಲಿ ರಾಜಕಾರಣದಲ್ಲಿ ಸಕ್ರಿಯ ರಾಗಿದ್ದಾರೆ.
ಅನಿಲ್ ಮಾಧವ್ ದವೆ: 60ರ ಹರೆಯದ ದಾವೆ ಮಧ್ಯಪ್ರದೇಶದ ಸಂಸದರು. ಪರಿಸರವಾದಿಯಾಗಿ ಹೆಸರು ಮಾಡಿದ್ದಾರೆ.
ಅರ್ಜುನ್ ಮೇಘವಾಲ್: ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ದಲಿತ ನಾಯಕ ರಲ್ಲೊಬ್ಬರು. ರಾಜಸ್ಥಾನದ ಬಿಕಾನೇರ್‌ನಿಂದ ಲೋಕಸಬೆಗೆ ಚುನಾಯಿತರಾಗಿದ್ದಾರೆ. ಉನ್ನತ ಸರಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ ರಾಜಕೀಯ ಪ್ರವೇಶಿಸಿದ ಮೇಘವಾಲ್, ಸಂಸತ್‌ಗೆ ಸೈಕಲ್‌ನಲ್ಲಿ ಪ್ರಯಾಣಿಸುವ ಮೂಲಕ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದರು. ಟೆಲಿಫೋನ್ ನಿರ್ವಾಹಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಎರಡು ವಿಫಲ ಪ್ರಯತ್ನಗಳ ಬಳಿಕ ರಾಜಸ್ಥಾನ ನಾಗರಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ತದನಂತರ ಐಎಎಸ್ ಅಧಿಕಾರಿಯಾಗಿ ಭಡ್ತಿಗೊಂಡಿದ್ದರು.
ರಾಮ್‌ದಾಸ್ ಅಠವಳೆ: ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಅಠವಳೆ (57), ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ಆರ್‌ಪಿಐನ ನಾಯಕರು. ನೂತನ ಸಂಪುಟದ ಪ್ರಮುಖ ದಲಿತ ಮುಖಗಳಲ್ಲಿ ಒಬ್ಬರಾಗಿದ್ದಾರೆ.
ರಮೇಶ್ ಚಂದಪ್ಪ ಜಿಗಜಿಣಗಿ: ದಲಿತ ನಾಯಕ ರಮೇಶ್ ಚಂದಪ್ಪ ಜಿಗಜಿಣಗಿ (64) ಕರ್ನಾಟಕದ ವಿಜಯ ಪುರ ಕ್ಷೇತ್ರದ ಸಂಸದ. 2014ರ ಮೇನಲ್ಲಿ ಮೋದಿ ಸಂಪುಟಕ್ಕೆ ಕರ್ನಾಟಕದ ಬಿಜೆಪಿ ಘಟಕವು ಶಿಫಾರಸು ಮಾಡಿದ ನಾಲ್ವರು ಸಂಸದರಲ್ಲಿ ಜಿಗಜಿಣಗಿ ಅವರ ಹೆಸರೂ ಇತ್ತು
ಫಗ್ಗನ್ ಸಿಂಗ್ ಕುಲಸ್ತೆ: ಬಿಜೆಪಿಯ ಪರಿಶಿಷ್ಟ ಮೋರ್ಚಾದ ಅಧ್ಯಕ್ಷರಾದ ಫಗ್ಗನ್ ಸಿಂಗ್ ಕುಲಸ್ತೆ (57), ಪ್ರಮುಖ ಬುಡಕಟ್ಟು ನಾಯಕರು. ಮಧ್ಯಪ್ರದೇಶದ ಮಾಧ್ಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ರಾಜೆನ್ ಗೊಹೈನ್: ಅಸ್ಸಾಂನ ನವಾಂಗ್ ಲೋಕಸಭಾ ಕ್ಷೇತ್ರದ ಸಂಸದ ರಾದ ಗೊಹೈನ್ (65), 1991ರಲ್ಲಿ ಬಿಜೆಪಿಗೆ ಸೇರ್ಪಡೆ ಗೊಂಡಿದ್ದರು. ಅವರು ನಾಲ್ಕು ಬಾರಿ ಲೋಕಸಭೆಗೆ ಆಯ್ಕೆ ಯಾಗಿದ್ದಾರೆ. ರಾಜ್ಯದ ಸಣ್ಣ ಪ್ರಮಾಣದ ಚಹಾ ಬೆಳೆಗಾರರ ಹಿತರಕ್ಷಣೆಗಾಗಿ ಹೋರಾಡಿದ್ದರು.
ಜಸ್ವಂತ್ ಸಿನ್ಹ ಭಾಭೋರ್: ಗುಜರಾತ್‌ನ ದಾಹೋಡ್ ಲೋಕಸಭಾ ಕ್ಷೇತ್ರದ ಸದಸ್ಯರಾದ ಭಾಭೋರ್ (49), ಆ ರಾಜ್ಯದ ಜನಪ್ರಿಯ ಬುಡಕಟ್ಟು ನಾಯಕರಾಗಿದ್ದಾರೆ. ಮೋದಿ ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಅವರು ಬುಡಕಟ್ಟು ವ್ಯವಹಾರಗಳು ಹಾಗೂ ಪರಿಸರ ಸೇರಿದಂತೆ ಹಲವು ಖಾತೆಗಳನ್ನು ನಿರ್ವಹಿಸಿದ್ದರು.
ಅಜಯ್ ಟಾಮ್ತಾ: ಉತ್ತರ ಖಂಡ್‌ನ ಅಲ್ಮೋರಾ ಕ್ಷೇತ್ರದ ಲೋಕಸಭಾ ಕ್ಷೇತ್ರದ ಸದಸ್ಯರು. 45 ವರ್ಷ ವಯಸ್ಸಿನ ಅವರು, ನೂತನ ಸಂಪುಟಕ್ಕೆ ಸೇರ್ಪಡೆಗೊಂಡ ದಲಿತ ಸಂಸದರಲ್ಲೊಬ್ಬರು.
ಕೃಷ್ಣಾ ರಾಜ್: ಉತ್ತರಪ್ರದೇಶದ ಶಹಜಹಾನ್‌ಪುರ್ ಲೋಕಸಭಾ ಕ್ಷೇತ್ರದ ಸಂಸದೆಯಾದ ಇವರು, ಬಿಜೆಪಿಯಿಂದ ಉತ್ತರಪ್ರದೇಶ ವಿಧಾನಸಭೆಗೆ ಎರಡು ಅವಧಿಗೆ ಚುನಾಯಿತರಾಗಿದ್ದರು. ಇಂದು ಸಂಪುಟಕ್ಕೆ ಸೇರ್ಪಡೆಗೊಂಡ ಇಬ್ಬರು ಮಹಿಳಾ ಸಚಿವೆಯರಲ್ಲೊಬ್ಬರು. ಆರೆಸ್ಸೆಸ್ ಜೊತೆಗಿನ ನಿಕಟ ಸಂಪರ್ಕ ಹಾಗೂ 2007ರಿಂದ 2012ರವರೆಗೆ ಸತತ ಎರಡು ಅವಧಿಗೆ, ಉತ್ತರಪ್ರದೇಶದ ಮುಹಮ್ಮದಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವುದು, ಕೇಂದ್ರ ಸಂಪುಟದಲ್ಲಿ ಸ್ಥಾನ ಪಡೆಯಲು ಕಾರಣ ವಾಗಿದೆ. ಸ್ನಾತಕೋತ್ತರ ಪದವೀಧರೆಯಾದ ಇವರು ಸಂಸತ್ ಕಲಾಪಗಳ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಮಹಿಳಾ ಸುರಕ್ಷತೆ, ಜಲಸಂರಕ್ಷಣೆ ಸೇರಿದಂತೆ 50ಕ್ಕೂ ಅಧಿಕ ಚರ್ಚೆಗಳಲ್ಲಿ ಪಾಲ್ಗೊಂಡು ಗಮನಸೆಳೆದಿದ್ದಾರೆ.
ಮನ್‌ಸುಖ್ ಭಾಯಿ ಮಾಂಡವೀಯ: ಗುಜರಾತ್‌ನ ರಾಜ್ಯಸಭೆಗೆ ಆಯ್ಕೆಯಾದವರು. 44 ವರ್ಷದ ಮಾಂಡವೀಯ ಪಟೇಲ್ ಸಮುದಾಯದ ನಾಯಕರಲ್ಲೊಬ್ಬರು.
ಸಿ.ಆರ್.ಚೌಧುರಿ: ರಾಜಸ್ಥಾನದ ನಾಗೌರ್ ಕ್ಷೇತ್ರದ ಲೋಕಸಭಾ ಎಂಪಿ. 68 ವರ್ಷದ ಚೌಧುರಿ, ರಾಜಸ್ಥಾನ ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿ ಅಪಾರ ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ.
ಸುಭಾಷ್ ರಾಮ್ ಭಾಮ್ರೆ: ಮೊದಲ ಬಾರಿಗೆ ಲೋಕ ಸಭೆ ಪ್ರವೇಶಿಸಿರುವ ಸುಭಾಷ್ ಭಾಮ್ರೆ (62) ಬಿಜೆಪಿ ಸೇರುವ ಮುನ್ನ ಶಿವಸೇನೆಯಲ್ಲಿ ದ್ದರು. ಮಹಾರಾಷ್ಟ್ರದ ಧುಲೆ ಕ್ಷೇತ್ರ ದಿಂದ ಆಯ್ಕೆಯಾಗಿದ್ದಾರೆ. ಕ್ಯಾನ್ಸರ್ ತಜ್ಞರಾದ ಇವರು ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋ ಜಿಸಿ ಜನಪ್ರಿಯರಾಗಿದ್ದಾರೆ. ಏಕ್‌ನಾಥ್ ಖಡ್ಸೆಯ ವರನ್ನು ಫಡ್ನವೀಸ್ ಸರಕಾರದಿಂದ ಕೈಬಿಟ್ಟ ಬಳಿಕ ಅಸಮಾಧಾನ ಗೊಂಡಿರುವ ಜಲ್‌ಗಾಂವ್-ಧುಲೆ ಪ್ರಾಂತದ ಬಿಜೆಪಿ ಬೆಂಬಲಿಗರನ್ನು ಓಲೈಸುವ ಪ್ರಯತ್ನವಾಗಿ ಭಾಮ್ರೆಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಗಿದೆಯೆನ್ನಲಾಗಿದೆ.





