ಸಾರ್ವತ್ರಿಕ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ: ಝೈದಿ
ಮೆಲ್ಬೋರ್ನ್,ಜು.5: ಎಲ್ಲ ರಾಜಕೀಯ ಪಕ್ಷಗಳಲ್ಲಿ ಸಹಮತವಿದ್ದರೆ ಮತ್ತು ಅಗತ್ಯ ಸಾಂವಿಧಾನಿಕ ತಿದ್ದುಪಡಿಗಳಾದರೆ ಸಾರ್ವತ್ರಿಕ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಭಾರತದ ಚುನಾವಣಾ ಆಯೋಗವು ಸಿದ್ಧವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಝೈದಿ ಅವರು ಹೇಳಿದ್ದಾರೆ.
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಬಹುದು. ಇದು ಕಾನೂನು ಸಚಿವಾಲಯಕ್ಕೆ ಆಯೋಗದ ಶಿಫಾರಸೂ ಹೌದು ಎಂದು ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಿದ್ದ ಝೈದಿ ಹೇಳಿದರು. ಅವರು ಆಸ್ಟ್ರೇಲಿಯಾದ ಚುನಾವಣಾ ಆಯೋಗದ ಆಹ್ವಾನದ ಮೇರೆಗೆ ಅಂತಾರಾಷ್ಟ್ರೀಯ ಚುನಾವಣಾ ವೀಕ್ಷಕರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಭೇಟಿ ನೀಡಿದ್ದಾರೆ.
ಸಂಬಂಧಿಸಿದ ಸಂಸದೀಯ ಸಮಿತಿಗೆ ನಾವು ಇಂತಹುದೇ ಶಿಫಾರಸನ್ನು ಮಾಡಿದ್ದೇವೆ. ಸಾಂವಿಧಾನಿಕ ತಿದ್ದುಪಡಿಗಳು ಅಗತ್ಯವಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳ ನಡುವೆ ವ್ಯಾಪಕ ಚರ್ಚೆಯ ಅಗತ್ಯವಿದೆ ಎಂದು ಸಮಿತಿಯೂ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ ಎಂದು ಅವರು ತಿಳಿಸಿದರು.