ನೈಟ್‌ರೈಡರ್ಸ್ ಮೇಲೆ ಜಮೈಕಾ ಸವಾರಿ
ಕೆಪಿಎಲ್: ಕ್ರಿಸ್ ಗೇಲ್ ಆಕರ್ಷಕ ಶತಕ

ಜಮೈಕಾ, ಜು.5: ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಬಾರಿಸಿದ 18ನೆ ಟ್ವೆಂಟಿ-20 ಶತಕದ ನೆರವಿನಿಂದ ಜಮೈಕಾ ತಂಡ ಟ್ರಿನಿಬಾಗೊ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿತು.
ನೈಡ್ ರೈಡರ್ಸ್ ನೀಡಿದ 192 ರನ್ ಕಠಿಣ ಗುರಿ ಬೆನ್ನಟ್ಟಿದ ಜಮೈಕಾ ತಂಡ ಗೇಲ್ ಔಟಾಗದೆ ಬಾರಿಸಿದ 108 ರನ್ ನೆರವಿನಿಂದ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು.
ಕೇವಲ 54 ಎಸೆತಗಳಲ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 18ನೆ ಶತಕವನ್ನು ಬಾರಿಸಿದ ಗೇಲ್ ಮತ್ತೊಮ್ಮೆ ಚುಟುಕು ಕ್ರಿಕೆಟ್‌ನ ಬಾಸ್ ಆಗಿ ಹೊರಹೊಮ್ಮಿದರು. ಗೇಲ್‌ರ ಮಿಂಚಿನ ವೇಗದ ಬ್ಯಾಟಿಂಗ್‌ನಲ್ಲಿ 6 ಬೌಂಡರಿ ಹಾಗೂ 11 ಸಿಕ್ಸರ್ ಸಿಡಿಸಿದ್ದರು. ಕೂಟದಲ್ಲಿ 2ನೆ ಜಯ ಸಾಧಿಸಿರುವ ಜಮೈಕಾ ತಂಡ ಅಂಕಪಟ್ಟಿಯಲ್ಲಿ 2ನೆ ಸ್ಥಾನ ತಲುಪಿದೆ. ನೈಟ್ ರೈಡರ್ಸ್ 4ನೆ ಪಂದ್ಯದಲ್ಲಿ 3ನೆ ಸೋಲು ಕಂಡಿತು.
ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ನೈಟ್ ರೈಡರ್ಸ್ ತಂಡ ಹಾಶಿಮ್ ಅಮ್ಲ ಬಾರಿಸಿದ್ದ ಆಕರ್ಷಕ ಅರ್ಧಶತಕ(74) ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು.





