ವಿಲಿಯಮ್ಸ್ ಸಹೋದರಿಯರು ಸೆಮಿಫೈನಲ್‌ಗೆ
ವಿಂಬಲ್ಡನ್ ಟೂರ್ನಿ

ಲಂಡನ್, ಜು.5: ಅಮೆರಿಕದ ವಿಲಿಯಮ್ಸ್ ಸಹೋದರಿಯರಾದ ವೀನಸ್ ಹಾಗೂ ಸೆರೆನಾ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತೇರ್ಗಡೆಯಾಗಿದ್ದಾರೆ. ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್ ವಿಂಬಲ್ಡನ್ ಟೂರ್ನಿಯಲ್ಲಿ 7 ವರ್ಷಗಳ ಬಳಿಕ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ 36ರ ಹರೆಯದ ವೀನಸ್ ಕಝಕಿಸ್ತಾನದ ಯಾರೊಸ್ಲೊವಾರನ್ನು 7-6(7/5), 6-2 ಸೆಟ್‌ಗಳ ಅಂತರದಿಂದ ಸೋಲಿಸಿದರು. 2009ರ ಬಳಿಕ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ಗೆ ತಲುಪಿದರು.
ಮಾರ್ಟಿನಾ ನವ್ರಾಟಿಲೋವಾ ಬಳಿಕ ವಿಂಬಲ್ಡನ್‌ನಲ್ಲಿ ಆಡುತ್ತಿರುವ ಹಿರಿಯ ಆಟಗಾರ್ತಿಯಾಗಿರುವ ವೀನಸ್ ಫೈನಲ್‌ಗೆ ತಲುಪಿದರೆ, ಸಹೋದರಿ ಸೆರೆನಾ ವಿಲಿಯಮ್ಸ್‌ರನ್ನು ಎದುರಿಸುವ ಸಾಧ್ಯತೆಯಿದೆ.
2008ರಲ್ಲಿ ಕೊನೆಯ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿದ್ದ ವೀನಸ್ 2010ರ ಯುಎಸ್ ಓಪನ್ ಬಳಿಕ ಮೊದಲ ಬಾರಿ ಅಂತಿಮ ನಾಲ್ಕರ ಸುತ್ತನ್ನು ತಲುಪಿದರು.
9ನೆ ಬಾರಿ ವಿಂಬಲ್ಡನ್ ಫೈನಲ್‌ಗೆ ತಲುಪುವ ವಿಶ್ವಾಸದಲ್ಲಿರುವ ವೀನಸ್ ಸೆಮಿಫೈನಲ್‌ನಲ್ಲಿ ಆಸ್ಟ್ರೆಲಿಯನ್ ಓಪನ್ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಸವಾಲು ಎದುರಿಸಲಿದ್ದಾರೆ.
ಸೆರೆನಾ ಸೆಮಿಗೆ: ರಶ್ಯದ ಅನಸ್ಟೇಸಿಯಾ ಪಾವ್ಲಚೆಂಕೊವಾ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 6-4, 6-4 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿರುವ ಸೆರೆನಾ ಸೆಮಿ ಫೈನಲ್‌ಗೆ ತಲುಪಿದರು.
22ನೆ ಗ್ರಾನ್‌ಸ್ಲಾಮ್ ಟ್ರೋಫಿ ಜಯಿಸಿ ಸ್ಟೆಫಿಗ್ರಾಫ್ ಓಪನ್ ಯುಗದ ದಾಖಲೆಯನ್ನು ಸರಿಗಟ್ಟಲು ಎದುರು ನೋಡುತ್ತಿರುವ ಹಾಲಿ ಚಾಂಪಿಯನ್ ಸೆರೆನಾ ಸೆಮಿ ಫೈನಲ್‌ನಲ್ಲಿ ರಶ್ಯದ ಇನ್ನೋರ್ವ ಆಟಗಾರ್ತಿ ಎಲೆನಾ ವೆಸ್ನಿನಾರನ್ನು ಎದುರಿಸಲಿದ್ದಾರೆ.
ನಾನು ಅಕ್ಕನೊಂದಿಗೆ(ವೀನಸ್) ಡಬಲ್ಸ್ ಪಂದ್ಯವನ್ನು ಆಡುವೆ. ನಾವಿಬ್ಬರೂ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಸೆರೆನಾ ಹೇಳಿದ್ದಾರೆ.
ವಿಂಬಲ್ಡನ್ ಫೈನಲ್‌ನತ್ತ ವಿಲಿಯಮ್ಸ್ ಸಹೋದರಿಯರ ಚಿತ್ತ
ಲಂಡನ್,ಜು.5: ವಿಂಬಲ್ಡನ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಸೆರೆನಾ ಹಾಗೂ ವೀನಸ್ ವಿಲಿಯಮ್ಸ್ ಫೈನಲ್‌ಗೆ ತಲುಪುವ ಗುರಿ ಹಾಕಿಕೊಂಡಿದ್ದಾರೆ.
ಕಳೆದ 15 ವರ್ಷಗಳಿಂದ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ವಿಲಿಯಮ್ಸ್ ಸಹೋದರಿಯರು ಪ್ರಾಬಲ್ಯ ಸಾಧಿಸುತ್ತಾ ಬಂದಿದ್ದಾರೆ. ಈ ಇಬ್ಬರು ಜೊತೆಯಾಗಿ 11 ಪ್ರಶಸ್ತಿಗಳನ್ನು ಜಯಿಸಿದ್ದು, 16 ಬಾರಿ ಫೈನಲ್‌ಗೆ ತಲುಪಿದ್ದಾರೆ. ನಾಲ್ಕು ಬಾರಿ ಈ ಇಬ್ಬರು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. 2009ರಲ್ಲಿ ಕೊನೆಯ ಬಾರಿ ಈ ಇಬ್ಬರು ಫೈನಲ್‌ನಲ್ಲಿ ಸೆಣಸಾಡಿದ್ದರು.
36ರ ಹರೆಯದ ವೀನಸ್ 22 ವರ್ಷಗಳ ಬಳಿಕ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿರುವ ಹಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು. 1994ರಲ್ಲಿ 37ರ ಹರೆಯದಲ್ಲಿ ಮಾರ್ಟಿನಾ ನವ್ರಾಟಿಲೋವಾ ಈ ಸಾಧನೆ ಮಾಡಿದ್ದರು. ಸೆರೆನಾ ಹಿರಿಯ ಸಹೋದರಿ ವಿರುದ್ಧ 16-11 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ.
ಕೆರ್ಬರ್ ಸೆಮಿಫೈನಲ್‌ಗೆ ಲಗ್ಗೆ: ರೊಮಾನಿಯದ ಸಿಮೊನಾ ಹಾಲೆಪ್‌ರನ್ನು ಮಣಿಸಿದ ಜರ್ಮನಿ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 4ನೆ ಶ್ರೇಯಾಂಕದ ಕೆರ್ಬರ್ ಅವರು ಹಾಲೆಪ್‌ರನ್ನು 7-5, 7-6(2) ಸೆಟ್‌ಗಳಿಂದ ಮಣಿಸಿದರು. ಈ ಮೂಲಕ ಎರಡನೆ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದಾರೆ.
ಜನವರಿಯಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಮೊದಲ ಬಾರಿ ಸಿಂಗಲ್ಸ್ ಪ್ರಶಸ್ತಿ ಜಯಿಸಿದ್ದ ಕೆರ್ಬರ್ ಮೊದಲ ಸೆಟ್‌ನ್ನು 7-5 ಅಂತರದಿಂದ ಜಯಿಸಿದರೆ ಎರಡನೆ ಸೆಟ್‌ನ್ನು ಟೈ-ಬ್ರೇಕ್‌ನಲ್ಲಿ ವಶಪಡಿಸಿಕೊಂಡರು.







