ನಿವೃತ್ತಿ ನಂತರವೂ ಶಿಕ್ಷಕರು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲಿ: ಬಿಷಪ್ ಡಾ.ಜೆರಾಲ್ಡ್

ಉಡುಪಿ, ಜು.5: ಶಿಕ್ಷಕ ವೃತ್ತಿ ಕೇವಲ ನಿವೃತ್ತಿಯ ತನಕ ಸೀಮಿತವಾಗಿರದೆ, ಅದರ ನಂತರವೂ ಆತ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿ ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ ಡಾ.ನೇರಿ ಕರ್ನೆಲಿಯೊ ಹಾಗೂ ದ್ವಿತೀಯ ದರ್ಜೆ ಸಹಾಯಕ ರಾಮಚಂದ್ರರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಕೆಥೊಲಿಕ್ ಶಿಕ್ಷಣ ಸೊಸೈಟಿ ಕಾರ್ಯದರ್ಶಿ ವಂ.ಡಾ.ಲಾರೆನ್ಸ್ ಡಿಸೋಜಮಾತನಾಡಿದರು.
ಡಾ.ನೇರಿ ಕರ್ನೆಲಿಯೊ ಹಾಗೂ ರಾಮಚಂದ್ರ ದಂಪತಿಯನ್ನು ಧರ್ಮಾಧ್ಯಕ್ಷರು ಹೂಹಾರ, ಶಾಲು, ಮೈಸೂರು ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಶಿಕ್ಷಕರ ಪರವಾಗಿ ಪ್ರೊ.ಮೆಲ್ವಿನ್ ರೇಗೊ, ವಿದ್ಯಾರ್ಥಿಗಳ ಪರವಾಗಿ ರೊಸಾಲಿಯಾ ಕಾರ್ಡೊಝಾ ಅಭಿನಂದನಾ ಸಂದೇಶ ನೀಡಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ.ನೇರಿ ಕರ್ನೆಲಿಯೊ ಹಾಗೂ ರಾಮಚಂದ್ರ ತಮಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಸ್ಟ್ಯಾನಿ ಬಿ. ಲೋಬೊ, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ.ಅನಿಲ್ ಪ್ರಕಾಶ್ ಕ್ಯಾಸ್ತಲಿನೊ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆಲನ್ ವಿನಯ್ ಲೂವಿಸ್, ಶಿಕ್ಷಕ ರಕ್ಷಕ ಸಂಘದ ಶೇಖರ್ ಬೈಕಾಡಿ, ಪಿಯು ಕಾಲೇಜಿನ ಪ್ರಾಂಶುಪಾಲೆ ಸವಿತಾ, ಶಿಕ್ಷಕ ಸಂಘದ ಕಾರ್ಯದರ್ಶಿ ಶಾಲೆಟ್ ಮಥಾಯಸ್, ವಿದ್ಯಾರ್ಥಿ ಸಂಘದ ನಿರ್ದೇಶಕ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು. ಕಾಲೇಜಿನ ನೂತನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿದರು. ಅನ್ನಮ್ಮ ವಂದಿಸಿದರು. ಶರ್ಲಿ ಕಾರ್ಯಕ್ರಮ ನಿರೂಪಿಸಿದರು.





