ಸರ ಕದ್ದು ಪರಾರಿಯಾಗಲೆತ್ನಿಸಿದ ಕಳ್ಳರನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು

ಕಾಸರಗೋಡು, ಜು.6: ಮಹಿಳೆಯ ಚಿನ್ನದ ಸರ ಎಗರಿಸಿ ಪರಾರಿಯಾಗಲೆತ್ನಿಸಿದ ಇಬ್ಬರು ಕಳ್ಳರನ್ನು ನಾಗರಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತ್ರಿಕ್ಕರಿಪುರದಲ್ಲಿ ನಡೆದಿದೆ.
ಬಂಧಿತರನ್ನು ಚೆರ್ವತ್ತೂರು ವೆಂಗಾಡ್ನ ಕೆ.ವಿ. ಬೈಜು (30) ಮತ್ತು ಟಿ.ಸಿಜಿತ್ (29) ಎಂದು ಗುರುತಿಸಲಾಗಿದೆ. ಮಣಿಯಾಟ್ ಎಂಬಲ್ಲಿ ಘಟನೆ ನಡೆದಿದೆ. ಮಂಗಳವಾರ ಸಂಜೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಟಿ.ವಿ. ರೋಹಿಣಿ ಎಂಬ ಮಹಿಳೆಯ ಐದು ಪವನ್ ಚಿನ್ನಾಭರಣವನ್ನು ಬೈಕ್ನಲ್ಲಿ ಬಂದ ಇಬ್ಬರು ಎಗರಿಸಿ ಪರಾರಿಯಾಗಿದ್ದರು. ರೋಹಿಣಿ ಬೊಬ್ಬೆ ಹಾಕಿದಾಗ ಧಾವಿಸಿ ಬಂದ ನಾಗರಿಕರು ಹುಡುಕಾಡಿದರೂ ಕಳ್ಳರಿಬ್ಬರು ಪರಾರಿಯಾಗಿದ್ದರು .
ಹಳದಿ ಮತ್ತು ಕಪ್ಪು ವಸ್ತ್ರ ಧರಿಸಿದ ಇಬ್ಬರು ಈ ಕೃತ್ಯ ನಡೆಸಿರುವುದಾಗಿ ರೋಹಿಣಿ ತಿಳಿಸಿದ್ದು, ಇದರ ಬೆನ್ನತ್ತಿ ವಾಹನಗಳಲ್ಲಿ ನಾಗರಿಕರು ಶೋಧ ನಡೆಸಿದರು. ಬಿರಿಯಾಚ್ಚೇರಿ ಎಂಬಲ್ಲಿ ಕಳ್ಳರಿಬ್ಬರನ್ನು ಗುರುತಿಸಿ ಬೆನ್ನಟ್ಟಿದ್ದು, ಮನೆಯೊಂದಕ್ಕೆ ನುಗ್ಗಿ ತಪ್ಪಿಸಲೆತ್ನಿಸಿದಾಗ ಹಿಡಿಯುವಲ್ಲಿ ಯಶಸ್ವಿಯಾದರು.
ಮಹಿಳೆಯಿಂದ ಎಗರಿಸಿದ್ದ ಸರವನ್ನು ಇವರಿಂದ ವಶಕ್ಕೆ ತೆಗೆದುಕೊಳ್ಳಲಾಯಿತು. ಬಳಿಕ ಥಳಿಸಿ ಚಂದೇರ ಪೊಲೀಸರಿಗೆ ಒಪ್ಪಿಸಲಾಯಿತು.
ಈ ಪರಿಸರದಲ್ಲಿ ನಡೆದ ಹಲವು ಚಿನ್ನಾಭರಣ ಎಗರಿಸಿದ ಪ್ರಕರಣಗಳಲ್ಲಿ ಇವರೇ ಶಾಮೀಲಾಗಿರಬಹುದೆಂದು ಶಂಕಿಸಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







