ಸ್ಮೃತಿ ಇರಾನಿ ಎಚ್‌ಆರ್‌ಡಿ ಖಾತೆ ಕೈತಪ್ಪಲು ಅಮಿತ್ ಶಾ ಕೈವಾಡ?

ಹೊಸದಿಲ್ಲಿ, ಜು.6: ಬಹುನಿರೀಕ್ಷಿತ ಕೇಂದ್ರ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾರೀ ನಷ್ಟ ಅನುಭವಿಸಿದ್ದಾರೆ. ಅವರನ್ನು ಅತ್ಯಂತ ಮಹತ್ವದ ಮಾನವ ಸಂಪನ್ಮೂಲಾಭಿವೃದ್ದಿ ಖಾತೆಯಿಂದ ಜವಳಿ ಖಾತೆಗೆ ವರ್ಗಾಯಿಸಲಾಗಿದೆ.
ಸ್ಮೃತಿ ಇರಾನಿಗೆ ಜವಳಿ ಖಾತೆಗೆ ಹಿಂಭಡ್ತಿ ನೀಡಿರುವುದರ ಹಿಂದೆ ಪ್ರಧಾನಿ ನರೇಂದ್ರಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೈವಾಡ ಹಾಗೂ ಸಚಿವೆಯಾಗಿ ಅವರ ಕಾರ್ಯವೈಖರಿಯೂ ಕಾರಣ ಎನ್ನಲಾಗಿದೆ. ಮೋದಿಗೆ ಸ್ಮತಿ ಇರಾನಿಯವರನ್ನು ಎಚ್‌ಆರ್‌ಡಿ ಖಾತೆಯಿಂದ ವರ್ಗಾಯಿಸಲು ಇಷ್ಟವಿರಲಿಲ್ಲ. ಆದರೆ, ಶಾ ಪ್ರಧಾನಿಗೆ ಒತ್ತಡ ಹಾಕಲು ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜವಳಿ ಖಾತೆಗೆ ವರ್ಗಾವಣೆಯಾಗಿರುವ ಸ್ಮತಿ ಇರಾನಿ ಖಂಡಿತವಾಗಿಯೂ ನಿರಾಶರಾಗಿದ್ದಾರೆ. ಸ್ಮತಿ ಇರಾನಿ ಅವರ ಕೆಲವು ನಿಲುವು ಎಚ್‌ಆರ್‌ಡಿ ಸಚಿವಾಲಯ ಕೈತಪ್ಪಲು ಪರೋಕ್ಷ ಕಾರಣ ಎನ್ನಲಾಗಿದೆ.
ತನ್ನದೇ ಶೈಕ್ಷಣಿಕ ಅರ್ಹತಾ ವಿವಾದ, ಜವಾಹರ್‌ಲಾಲ್ ನೆಹರೂ ಯುನಿವರ್ಸಿಟಿ ್ಖವಿವಾದ ಹಾಗೂ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ಸ್ಮತಿ ವಿಲನ್ ಆಗಿ ಬಿಂಬಿಸಲ್ಪಟ್ಟಿದ್ದು ಎಚ್‌ಆರ್‌ಡಿ ಖಾತೆ ಕೈತಪ್ಪಲು ಪೂರಕ ಕಾರಣ ವಾಗಿದ್ದವು ಎಂದು ವಿಶ್ಲೇಷಿಸಲಾಗುತ್ತಿದೆ.
ಕ್ಯಾಬಿನೆಟ್ ಸಹೋದ್ಯೋಗಿ ಬಂಡಾರು ದತ್ತಾತ್ರೇಯ ದೂರಿನ ಮೇರೆಗೆ ಹೈದರಾಬಾದ್‌ನ ವಿವಿಯಲ್ಲಿ ರೋಹಿತ್ ವೇಮುಲಾ ಸಹಿತ ಇತರ ದಲಿತ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ ಪ್ರಕರಣ, ಜೆಎನ್‌ಯು ವಿದ್ಯಾರ್ಥಿಗಳನ್ನು ದೇಶದ್ರೋಹ ಪ್ರಕರಣದಲ್ಲಿ ಕೇಂದ್ರ ಸರಕಾರ ಬಂಧಿಸಲು ನಿರ್ಧರಿಸಿದ್ದಾಗಲೂ ಇರಾನಿ ಟೀಕೆ ಎದುರಿಸಿದ್ದರು.
ಕೇಂದ್ರೀಯ ವಿದ್ಯಾಲಯದಲ್ಲಿ ಜರ್ಮನಿ ಬದಲಿಗೆ ಸಂಸ್ಕೃತವನ್ನು ಕಲಿಸುವ ನಿರ್ಧಾರ ಕೈಗೊಂಡಿದ್ದು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಅಂಬೇಡ್ಕರ್ ಪರಿವಾರ್ ಗ್ರೂಪ್‌ಗೆ ನಿಷೇಧ ಹೇರಬೇಕೆಂದು ಎಚ್‌ಆರ್‌ಡಿ ಸಚಿವಾಲಯ ಐಐಟಿ ಮದ್ರಾಸ್‌ಗೆ ಪತ್ರ ಬರೆದಿರುವ ವಿಷಯಕ್ಕೆ ಸಂಬಂಧಿಸಿ ಇರಾನಿ ವಿವಾದಕ್ಕೆ ಸಿಲುಕಿದ್ದರು.







