ಜು.8ರಿಂದ 130 ರೂ.ಗೆ ತೊಗರಿಬೇಳೆ ಲಭ್ಯ: ಸಚಿವ ಯು.ಟಿ. ಖಾದರ್

ಮಂಗಳೂರು, ಜು.6: ತೊಗರಿಬೇಳೆ, ಸಕ್ಕರೆ ಮತ್ತು ಎಣ್ಣೆಯನ್ನು ಚಿಲ್ಲರೆ ಅಂಗಡಿಗಳಲ್ಲಿ 50 ಕ್ವಿಂಟಾಲ್, ಗ್ರಾಮೀಣ ಭಾಗದ ಸಗಟು ವ್ಯಾಪಾರಿಗಳು 1000 ಕ್ವಿಂಟಾಲ್ ಮತ್ತು ನಗರ ಪ್ರದೇಶದ ಸಗಟು ವ್ಯಾಪಾರಿಗಳು 2,000 ಕ್ವಿಂಟಾಲ್‌ಗಿಂತ ಜಾಸ್ತಿ ಶೇಖರಣೆ ಮಾಡಿದರೆ, ಶೇಖರಿಸಿರುವ ದಾಸ್ತಾನನ್ನು ವಶಪಡಿಸಿಕೊಂಡು ದಂಡವನ್ನು ವಿಧಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಈಡನ್‌ಕ್ಲಬ್‌ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಗತ್ಯವಿರುವ ಆಹಾರಧಾನ್ಯಗಳ ದರವು ಹೆಚ್ಚಳವಾಗುತ್ತಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಗತ್ಯಕ್ಕಿಂತ ಹೆಚ್ಚು ದಾಸ್ತಾನಿಟ್ಟು ಬೆಲೆ ಏರಿಕೆ ಸೃಷ್ಟಿಸುತ್ತಿರುವುದು ಗಮನಕ್ಕೆ ಬಂದಿದ್ದು ಶೇಖರಣೆ ಮಾಡಿರುವ ದಾಸ್ತಾನನ್ನು ಮಾರುಕಟ್ಟೆಗೆ ಹಾಕಬೇಕು ಎಂದು ತಿಳಿಸಿದರು.
ತೊಗರಿಬೇಳೆಗೆ 130 ರೂ. ದರ ನಿಗದಿ
ತೊಗರಿಬೇಳೆ ಬೆಲೆ ಹೆಚ್ಚಳವಾಗಿರುವುದರಿಂದ ರಾಜ್ಯ ಸರಕಾರ ತೊಗರಿ ಬೇಳೆಗೆ ಕೆ.ಜಿಗೆ 130 ರೂ. ದರವನ್ನು ನಿಗದಿಪಡಿಸಿದೆ. ಜು.8 ರಿಂದ ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿಯೂ ತೊಗರಿಬೇಳೆ 130 ರೂ.ಗೆ ಲಭ್ಯವಾಗಲಿದೆ. ಇದಕ್ಕೆ ಸ್ವಲ್ಪ ಲಾಭಂಶವನ್ನಿಟ್ಟುಕೊಂಡು ಮಾರಾಟ ಮಾಡಬಹುದೆ ಹೊರತು ಹೆಚ್ಚಿನ ಬೆಲೆ ವಸೂಲಿ ಮಾಡಿದರೆ ಕ್ರಮಕೈಗೊಳ್ಳಲಾಗುವುದು. ರಾಜ್ಯದಲ್ಲಿ ಇನ್ನು ಮೂರು ತಿಂಗಳು ಇದೇ ದರದಲ್ಲಿ ತೊಗರಿ ಬೇಳೆ ಮಾರಾಟ ನಡೆಯಲಿದೆ ಎಂದು ಹೇಳಿದರು.
ಆಧಾರ್ ಕಾರ್ಡ್‌ನ್ನು ಪಡಿತರ ಚೀಟಿಯೊಂದಿಗೆ ಜೋಡಣೆ ಮಾಡುವ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿದ್ದು ಈಗಾಗಲೆ 87 ಶೇ.ಪ್ರಕ್ರಿಯೆ ಮುಗಿದಿದೆ. ಆದರೆ ಜೋಡಣೆ ಆಗದಿರುವವರಿಗೆ ಪಡಿತರವನ್ನು ನಿಲ್ಲಿಸಿದರೆ ಆಯಾ ಜಿಲ್ಲೆಯ ಉಪನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮೈಸೂರು ಜಿಲ್ಲೆಯಲ್ಲಿ ಈ ರೀತಿಯ ದೂರು ಬಂದಿರುವುದರಿಂದ ಮೈಸೂರು ಜಿಲ್ಲೆಯ ಉಪನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.







