ಉಗ್ರರಿಗೆ ‘ಉಕ್ಕಿನ ಮುಷ್ಠಿಯಿಂದ’ ಪ್ರತ್ಯುತ್ತರ
ಸೌದಿ ದೊರೆ ಸಲ್ಮಾನ್ ಪ್ರತಿಜ್ಞೆ

ರಿಯಾದ್,ಜು.6: ರಮಝಾನ್ ಕೊನೆಯ ದಿನದ ಅಂಗವಾಗಿ ಮಂಗಳವಾರ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ಲಝೀಝ್ ತಮ್ಮ ದೇಶವಾಸಿಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ದೇಶದ ಯುವಜನತೆಯನ್ನು ಗುರಿಯಾಗಿಸುವ ಧಾರ್ಮಿಕ ಭಯೋತ್ಪಾದಕರಿಗೆ ‘ಉಕ್ಕಿನ ಮುಷ್ಠಿ’ಯಿಂದ ಪ್ರತ್ಯುತ್ತರ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ದೊರೆ ಸಲ್ಮಾನ್ ಅವರ ಹೆಸರಿನಲ್ಲಿ ಭಾಷಣವನ್ನು ಮಾಹಿತಿ ಸಚಿವರು ನೀಡಿದ್ದು, ಈದ್ ದಿನವಾದ ಇಂದು ಅಧಿಕೃತ ಸೌದಿ ಪ್ರೆಸ್ ಏಜನ್ಸಿ ಅದನ್ನು ಪ್ರಕಟಿಸಿದೆ.
‘‘ದೇಶದ ನಿಜವಾದ ಆಸ್ತಿಯನ್ನು ಸಂರಕ್ಷಿಸಿ ದೇಶದ ಯುವಜನತೆ ಉಗ್ರಗಾಮಿಗಳ ಆಮಿಷಕ್ಕೆ ಬಲಿಯಾಗದಂತೆ ತಡೆದು ಅವರ ಭವಿಷ್ಯ ಹಸನಾಗಿಸುವ ಕಾರ್ಯ ದೇಶದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ,’’ ಎಂದು ದೊರೆ ಸಲ್ಮಾನ್ ಹೇಳಿದ್ದಾರೆ.
‘‘ನಮ್ಮ ಯುವ ಜನತೆಯ ಮನಸ್ಸನ್ನು ಕೆಡಿಸುತ್ತಿರುವ ಅವರ ವಿರುದ್ಧ ನಾವು ‘‘ಉಕ್ಕಿನ ಮುಷ್ಠಿ’’ಯಿಂದ ದಾಳಿ ನಡೆಸುವೆವು’’ ಎಂದೂ ಅವರು ತಿಳಿಸಿದ್ದಾರೆ.
ಇಸ್ಲಾಂ ಧರ್ಮೀಯರ ಪವಿತ್ರ ಸ್ಥಳಗಳಲ್ಲೊಂದಾದ ಮದೀನಾದಲ್ಲಿರುವ ಪ್ರವಾದಿ ಮಸೀದಿಯ ಹೊರಗೆ, ಜಿದ್ದಾದ ಅಮೆರಿಕನ್ ಕಾನ್ಸುಲೇಟ್ ಹೊರಗೆ ಹಾಗೂ ಖತೀಫ್‌ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿಗಳು ನಡೆದ ಮರುದಿನ ದೊರೆ ಸಲ್ಮಾನ್ ಅವರ ಈ ಹೇಳಿಕೆ ಬಂದಿದೆ.





