ಮದೀನಾ ಆತ್ಮಹತ್ಯಾ ದಾಳಿ ‘ಇಸ್ಲಾಮಿನ ಮೇಲಿನ ಆಕ್ರಮಣ’ : ವಿಶ್ವ ಸಂಸ್ಥೆ

ಜಿದ್ದಾ, ಜು.6: ಮದೀನಾದಲ್ಲಿರುವ ಪ್ರವಾದಿಯವರ ಮಸೀದಿಯ ಹೊರಗೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯನ್ನು ‘ಇಸ್ಲಾಮಿನ ಮೇಲಿನ ಆಕ್ರಮಣ’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳಿಗಾಗಿನ ಹೈಕಮಿಷನರ್ ಹಾಗೂ ಜೊರ್ಡನ್ ರಾಜ ವಂಶದ ಸದಸ್ಯ ಝೇದ್ ರಾ’ಅದ್ ಅಲ್ ಹುಸೈನ್ ಹೇಳಿದ್ದಾರೆ.
‘‘ಇದು ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ಇಂತಹ ಒಂದು ದಾಳಿ ರಮಝಾನ್ ಸಂದರ್ಭ ಇಲ್ಲಿ ನಡೆದಿರುವುದು ವಿಶ್ವದಾದ್ಯಂತ ಇರುವ ಮುಸ್ಲಿಮರ ಮೇಲಿನ ನೇರ ದಾಳಿಗೆ ಸಮವಾಗಿದೆ’’ ಎಂದು ತಮ್ಮ ವಕ್ತಾರರ ಮೂಲಕ ಜಿನೆವಾದಲ್ಲಿ ನೀಡಿದ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಈ ದಾಳಿ ಜಗತ್ತಿನಾದ್ಯಂತ ಮುಸ್ಲಿಮ್ ಸಮುದಾಯಕ್ಕೆ ಆಘಾತ ಉಂಟು ಮಾಡಿದೆ. ಪವಿತ್ರ ಸ್ಥಳವನ್ನು ಕಾವಲು ಕಾಯುತ್ತಿದ್ದ ನನ್ನ ನಾಲ್ಕು ಮಂದಿ ಸಹೋದರರ ಸಾವು ಹಾಗೂ ಐದು ಮಂದಿ ಇತರರಿಗೆ ಉಂಟಾದ ಗಾಯಗಳಿಂದ ನನಗೆ ಆಘಾತವಾಗಿದೆ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ‘‘ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮದೀನಾ ಈ ದಿನದಲ್ಲಿ ದು:ಖಗೊಂಡಿದೆ’’ ಎಂದು ಇನ್ನೊಂದು ಟ್ವೀಟ್ ಹೇಳುತ್ತದೆ.
ಡಾಯೀಶ್ _ಅಟ್ಯಾಕ್ಸ್_ ಪ್ರಾಫೆಟ್ಸ್_ ಮೋಸ್ಕ್_ ಆ್ಯಂಡ್-ಗ್ರೇವ್‌ಹ್ಯಾಶ್ ಟ್ಯಾಗ್ ಟ್ವಿಟ್ಟರಿನಲ್ಲಿ ಟ್ರೆಂಡಿಂಗ್ ಆಗಿತ್ತಲ್ಲದೆ, 79 ಲಕ್ಷಕ್ಕೂ ಹೆಚ್ಚು ಟ್ವಿಟ್ಟರ್ ಬಳಕೆದಾರರು ಟ್ವೀಟ್ ಗಳ ಮುಖಾಂತರ ಈ ದಾಳಿಯನ್ನು ಖಂಡಿಸಿದ್ದಾರೆ. ಜೊತೆಗೆ ಉಗ್ರವಾದಿಗಳ ಕಾರ್ಯ ವಿಫಲವಾಗುವಂತೆ ಮಾಡಿದ ಭದ್ರತಾ ಸಿಬ್ಬಂದಿಯ ಕಾರ್ಯವನ್ನು ಪ್ರಶಂಸಿಸಿದ್ದಾರೆ.







