ಸೌರ ವಿದ್ಯುತ್ ಉತ್ಪಾದನೆ ಅಕ್ರಮ ಪ್ರಕರಣ: 9 ಅಧಿಕಾರಿಗಳ ಅಮಾನತು
.jpg)
ಬೆಂಗಳೂರು, ಜು.6: ಬೆಸ್ಕಾಂನಲ್ಲಿ ಭಾರೀ ಅಕ್ರಮ ಪ್ರಕರಣ ಸಂಬಂಧ ಅಧಿಕಾರಿಗಳ ತಲೆದಂಡವಾಗಿದೆ. ಪಿಪಿಪಿ ಮಾದರಿ ಸೌರ ವಿದ್ಯುತ್ ಉತ್ಪಾದನೆ ಅಕ್ರಮ ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪದ ಮೇಲೆ 9 ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳನ್ನು ಅಮಾನತುಗೊಳಿಸಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಾಮೀಲಾದ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳ ಸಂಖ್ಯೆ ಹೆಚ್ಚಿದೆ. ಇಂದು ಮೊದಲ ಹಂತದಲ್ಲಿ 9 ಅಧಿಕಾರಿಗಳ ಅಮಾನತು ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಅಧಿಕಾರಿಗಳನ್ಙು ಬಲಿ ಹಾಕುತ್ತೇನೆ ಎಂದು ಬೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅಮಾನತು ಆದ ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳು
ಎಂ.ಆರ್. ರಮೇಶ್ ಚಿಕ್ಕಬಳ್ಳಾಪುರ
ಕೆ.ಎಲ್. ಲೋಕೇಶ್ ಕೆಜಿಎಫ್
ಬಿ.ವಿ. ಜಗದೀಶ್ ಹಿರಿಯೂರು.
ಕೆ.ಎಚ್.ಗುರುಸ್ವಾಮಿ ಮಧುಗಿರಿ.
ಎಚ್.ಕೃಷ್ಣಪ್ಪ ಹಾವೇರಿ
ಶಿವಣ್ಣಗೌಡ ಆರ್. ಪಾಟೀಲ್ ಬಾಗಲೋಟೆ
ಡಿ.ಎಚ್.ಉಮೇಶ್ ಗದಗ್
ಡಿ.ಮಹೇಶ್ ಕೊಪ್ಪಳ
ಬಸಪ್ಪ ಕೆ. ಪಟ್ಟಣಶೆಟ್ಟಿ ಸಿಂದನೂರು
ಒಟ್ಟು 5,631 ಮೇಲ್ಛಾವಣಿ ವಿದ್ಯುತ್ ಖರೀದಿ ಅರ್ಜಿಗಳು ಬಂದಿವೆ. 3,494 ಅರ್ಜಿಗಳಿಗೆ ಒಪ್ಪಂದ ಆಗಿವೆ. 1,566 ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಒಪ್ಪಂದ ಆಗಿದೆ. ಇದರಲ್ಲಿ ಶೇ.99ರಷ್ಟು ಒಪ್ಪಂದ ಷರತ್ತು ಉಲ್ಲಂಘನೆ ಆಗಿವೆ. ಶಾಮೀಲಾಗಿರುವ 9ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳನ್ನು ಅಮಾನತು ಮಾಡಿದ್ದೇವೆ. ಇದರಲ್ಲಿ ಇನ್ನೂ ಹೆಚ್ಚಿನ ಸಂಖ್ಯೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ. ಕೂಲಂಕುಶ ಪರಿಶೀಲನೆ ನಂತರ ಮತ್ತಷ್ಟು ಮಂದಿ ಮೇಲೆ ಕ್ರಮ ಜರುಗಿಸುತ್ತೇವೆ ಎಂದರು.
ಬಹಳ ಕಡೆ ಕಟ್ಟಡ ಇಲ್ಲದೇ ಇದ್ದರೂ, ಆರ್ಆರ್ ನಂಬರ್ ಇಲ್ಲದೇ ಇದ್ರೂ ಖಾಲಿ ಜಮೀನಿನಲ್ಲೂ ಸೌರ ವಿದ್ಯುತ್ ಘಟಕ ಅಳವಡಿಸಿ ಅವರಿಂದ ವಿದ್ಯುತ್ ಖರೀದಿ ಒಪ್ಪಂದ ಮಾಡುತ್ತಿರುವ ದೂರುಗಳು ಬಂದಿದ್ದವು. ಹೀಗಾಗಿ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡ ಕಳುಹಿಸಲಾಗಿತ್ತು. ಇದರಿಂದ ಅಕ್ರಮ ಪ್ರಕರಣ ಬಯಲಿಗೆ ಬಂದಿದೆ ಎಂದರು.
ರೂಫ್ ಟಾಪ್ ಸೋಲಾರ್ ವಿಚಾರದಲ್ಲಿ ಕೆಲವರು ಕಟ್ಟಡಗಳಿಲ್ಲದಿದ್ರೂ ಅಳವಡಿಸಿದ್ದಾರೆ. ಇದರಲ್ಲಿ ಕೆಲ ಇಂಜಿನಿಯರ್ಗಳೂ ಶಾಮೀಲಾಗಿದ್ದಾರೆ. ಆದರೆ ಬಿಲ್ಡಿಂಗ್ ಇಲ್ಲದೆ ಯೋಜನೆಗೆ ಅವಕಾಶ ಇಲ್ಲ. ನಿಯಮ ಉಲ್ಲಂಘಿಸಿ ಪಿಪಿಎ ಗಳು ಆಗಿವೆ. ನಿಯಮ ಉಲ್ಲಂಘಿಸಿ ಪಿಪಿಎ ಮಾಡಿಕೊಂಡಿರುವ ಒಡಂಬಡಿಕೆಯನ್ನು ರದ್ದು ಮಾಡಲಾಗುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.







