ಗೌಡರ ಮನೆಯಲ್ಲಿ ಸಾಹೇಬರ ಈದುಲ್ ಫಿತ್ರ್!

ಚಿಕ್ಕಮಗಳೂರು, ಜು.6: ಹಲವಾರು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೊಪ್ಪ ಪೇಟೆಯಲ್ಲಿ ವ್ಯಾಪಾರಸ್ಥರಾಗಿರುವ ಮದ್ದಾಸ್ ಕುಟುಂಬದ ಸದಸ್ಯರು ವಿಭಿನ್ನವಾಗಿ ಈದುಲ್ ಫಿತ್ರ್‌ನ್ನು ಆಚರಿಸಿದರು. ಅರೇ, ಇದರಲ್ಲೇನು ವಿಶೇಷ ಎಂದು ಕೇಳುತ್ತಿದ್ದೀರಾ? ಅಲ್ಲೇ ಇರುವುದು ಸ್ವಾರಸ್ಯ. ಅಂದಹಾಗೆ ಇವರು ಈದುಲ್ ಫಿತ್ರ್ ಹಬ್ಬವನ್ನು ಆಚರಿಸಿದ್ದು ಇವರ ಮನೆಯಲ್ಲಲ್ಲ, ಬದಲಾಗಿ ಕೊಪ್ಪ ತಾಲೂಕಿನ ಕೂಸುಗೊಳ್ಳಿಯ ಎಚ್.ಪಿ. ನಾಗರಾಜ ಎಂಬವರ ಮನೆಯಲ್ಲಿ.
ಹೌದು, ಕೊಪ್ಪದ ಮದ್ದಾಸ್ ಕುಟುಂಬಸ್ಥರು ಇಲ್ಲಿನ ನಾಗರಾಜ ಅವರ ಕುಟುಂಬಸ್ಥರ ಜೊತೆಗೆ ಸೇರಿ ಜೊತೆಯಾಗಿ ಈದುಲ್ ಫಿತ್ರ್‌ನ್ನು ಆಚರಿಸುವ ಮೂಲಕ ಹಲವಾರು ವರ್ಷಗಳಿಂದ ಕೋಮು ಸೌಹಾರ್ದತೆಯ ಸಂದೇಶವನ್ನು ಸಾರಿಕೊಂಡು ಬರುತ್ತಿದ್ದಾರೆ.
ಪ್ರತೀವರ್ಷ ಮದ್ದಾಸ್ ಕುಟುಂಬದ ಸದಸ್ಯರು ಬೆಳಗ್ಗೆ ಮಸೀದಿಯಲ್ಲಿ ಈದ್ ನಮಾಝ್‌ನ್ನು ಪೂರೈಸಿ ಬಳಿಕ ನೇರವಾಗಿ ಎಚ್. ನಾಗರಾಜ ಅವರ ಮನೆಗೆ ತೆರಳುತ್ತಾರೆ. ಅಲ್ಲಿ ಕುಟುಂಬಸ್ಥರ ಜೊತೆಗೆ ಸೇರಿ, ದಿನಪೂರ್ತಿ ಹಬ್ಬ ಆಚರಿಸಿ ಸಂಜೆ ವೇಳೆಗೆ ತಮ್ಮ ಮನೆಗೆ ಮರಳುತ್ತಾರೆ.
ಕೋಮುಗಳ ನಡುವಿನ ಅಂತರ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೋಮು ಸೌಹಾರ್ದವನ್ನು ಬೆಸೆಯುವ ಇಂತಹ ಪ್ರಯತ್ನಗಳು ಎಲ್ಲರಿಗೂ ಮಾದರಿಯಾಗಿದೆ.

ಮನೆಯ ಯಜಮಾನ ಎಚ್.ಪಿ. ನಾಗರಾಜ (ವೃತ್ತದಲ್ಲಿ)








