ಗುಂಪುಗಾರಿಕೆಯಿಂದ ರಾಜ್ಯ ರಾಜಕೀಯ ಹದಗೆಟ್ಟಿದೆ: ಎಚ್.ಡಿ.ದೇವೇಗೌಡ

ಬೆಂಗಳೂರು, ಜು.6: ಕರ್ನಾಟಕದಲ್ಲಿ ರಾಜ್ಯ ರಾಜಕೀಯ ಹದಗೆಡಲು ಗುಂಪು ರಾಜಕಾರಣವೇ ಕಾರಣ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರಾದೇಶಿಕ ಪಕ್ಷದ ಪ್ರಾಮುಖ್ಯತೆ ಕುರಿತ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಜಲಿಂಗಪ್ಪ, ಬಿ.ಡಿ.ಜತ್ತಿ, ದೇವರಾಜ್ ಅರಸ್ ಸೇರಿದಂತೆ ವಿವಿಧ ನಾಯಕರುಗಳ ಗುಂಪುಗಳು ಮತ್ತು ಆಗಿನ ಪರಿಸ್ಥಿತಿಗಳು ರಾಜ್ಯ ರಾಜಕಾರಣ ಹದಗೆಡಲು ಈಗ ಕಾರಣವಾಗಿದೆ ಎಂದು ಹೇಳಿದರು. ನಾನು ಮೂಲತಃ ಕಾಂಗ್ರೆಸ್‌ನವನು, ಆಗಿನ ನಾಯಕರಾದ ಬಿ.ಡಿ.ಜತ್ತಿ, ನಿಜಲಿಂಗಪ್ಪ ಅವರ ಗುಂಪು ರಾಜಕಾರಣದಿಂದಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುವಂತಾಯಿತು ಎಂದು ಹೇಳಿದರು.
ದೇವರಾಜ ಅರಸ್‌ರವರು ತಮ್ಮಂದಿಗೆ ನನ್ನನ್ನು ಸೇರಿಸಿಕೊಳ್ಳಲು ತುಂಬ ಪ್ರಯತ್ನ ಪಟ್ಟಿದ್ದರು. ಆಗ ಅವರಿಗೆ ನೇರವಾಗೇ ಹೇಳಿದ್ದೆ, ಇಂದಿರಾಗಾಂಧಿ ಅವರು ಪಕ್ಷದಲ್ಲಿ ಅಶಿಸ್ತಿನ ಬೀಜ ಬಿತ್ತಿದ್ದಾರೆ ಅದು ಹೆಮ್ಮರವಾಗಿ ಬೆಳೆಯುತ್ತದೆ. ಕಾಂಗ್ರೆಸ್ ಛಿದ್ರವಾಗುತ್ತದೆ ಎಂದು ಹೇಳಿದ್ದೆ. ಅದೆಲ್ಲಾ ಈಗ ಇತಿಹಾಸ ಎಂದು ಹೇಳಿದರು.





