ಕೇಂದ್ರ ಸರಕಾರದ ನಿರ್ಧಾರ ತಿರಸ್ಕರಿಸಿದ ಸುಪ್ರೀಂಕೋರ್ಟ್
ನ್ಯಾಯಾಧೀಶರ ನೇಮಕ

ಹೊಸದಿಲ್ಲಿ, ಜು.6: ನ್ಯಾಯಾಧೀಶರ ನೇಮಕಾತಿಯಲ್ಲಿ ಸರಕಾರದ ನಿರ್ಧಾರಕ್ಕೆ ಹೆಚ್ಚಿನ ಮಹತ್ವ ನೀಡುವ ಕುರಿತ ಕೇಂದ್ರ ಸರಕಾರದ ಪ್ರಸ್ತಾಪವನ್ನು ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿ ತಳ್ಳಿಹಾಕಿದೆ.
ಸರಕಾರ ಹಾಗೂ ನ್ಯಾಯಾಂಗದ ನಡುವಿನ ಹಗ್ಗಜಗ್ಗಾಟದಿಂದಾಗಿ ದೇಶಾದ್ಯಂತ ಖಾಲಿ ಇರುವ 400ಕ್ಕೂ ಹೆಚ್ಚು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ವಿಚಾರ ನನೆಗುದಿಗೆ ಬಿದ್ದಿದೆ.
ಇತ್ತೀಚೆಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮಾಜಿ ಕಾನೂನು ಸಚಿವ ಸದಾನಂದ ಗೌಡ ಅವರು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್‌ರನ್ನು ಭೇಟಿ ಮಾಡಿ, ಭಿನ್ನಾಭಿಪ್ರಾಯ ಪರಿಹರಿಸುವ ಪ್ರಯತ್ನ ನಡೆಸಿದ್ದರು. ಈ ಸಭೆಯ ಬಳಿಕ, ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ಇತರ ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯು ಈ ಪ್ರಸ್ತಾಪವನ್ನು ಪರಿಶೀಲಿಸಿ, ತಿರಸ್ಕರಿಸಿತು ಎಂದು ಉನ್ನತ ಮೂಲಗಳು ಹೇಳಿವೆ.
ಸರಕಾರದ ಪ್ರಕಾರ, ಪ್ರತಿಭೆ ಹಾಗೂ ಜ್ಯೇಷ್ಠತೆ, ನ್ಯಾಯಮೂರ್ತಿಗಳ ನೇಮಕಕ್ಕೆ ಮಾನದಂಡವಾಗಬೇಕು. ಆದರೆ ನ್ಯಾಯಮೂರ್ತಿಗಳ ಅಭಿಪ್ರಾಯದ ಪ್ರಕಾರ ಹಾಲಿ ಇರುವ ವ್ಯವಸ್ಥೆ ಮುಂದುವರಿಯಬೇಕು. ಪ್ರತಿಭೆಯ ಅಂಶಗಳನ್ನೂ ಒಳಗೊಂಡ ಜ್ಯೇಷ್ಠತೆ ಮಾನದಂಡವಾಗಬೇಕು. ಇತರ ಕೆಲ ಮಹತ್ವದ ಅಂಶಗಳೆಂದರೆ ರಾಷ್ಟ್ರೀಯ ಭದ್ರತೆಯ ಕಾರಣಕ್ಕೆ ಅಭ್ಯರ್ಥಿಗಳನ್ನು ತಿರಸ್ಕರಿಸುವುದು, ನ್ಯಾಯಾಧೀಶರ ನೇಮಕಾತಿಯಲ್ಲಿ ನಿವೃತ್ತ ನ್ಯಾಯಮೂರ್ತಿಗಳನ್ನು ತೊಡಗಿಸಿಕೊಳ್ಳುವುದು, ಅಟಾರ್ನಿ ಜನರಲ್ ಹಾಗೂ ಅಡ್ವೊಕೇಟ್ ಜನರಲ್ ಇದರಲ್ಲಿ ಪಾಲ್ಗೊಳ್ಳುವುದು ಸೇರಿದೆ. ಈ ಅಂಶಗಳನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.







