ತಪ್ಪು ಬೇಹು ವರದಿ ಆಧರಿಸಿ ಇರಾಕ್ ಯುದ್ಧಕ್ಕೆ ಹೋದ ಬ್ಲೇರ್
ಬ್ರಿಟಿಷ್ ತನಿಖಾ ವರದಿ

ಲಂಡನ್, ಜು.6: ಇರಾಕ್ ಯುದ್ಧದ ಕುರಿತು ತನಿಖೆ ನಡೆಸಿದ ಬ್ರಿಟಿಷ್ ತನಿಖಾ ಸಮಿತಿಯು ಮಾಜಿ ಪ್ರಧಾನಿ ಟೋನಿ ಬ್ಲೇರ್ ಅವರ ಕ್ರಮವನ್ನು ಮತ್ತು ಅವರ ಸರಕಾರದ ಕ್ರಮವನ್ನು ಕಟುವಾಗಿ ಟೀಕಿಸಿದ್ದು, ತಪ್ಪು ಬೇಹು ವರದಿ ಆಧರಿಸಿ ಇರಾಕ್ ಯುದ್ಧಕ್ಕೆ ಹೋಗಿರುವುದು ಖಂಡನೀಯ ಎಂದು ಹೇಳಿದೆ.
ಬಹುನಿರೀಕ್ಷಿತ ತನಿಖಾ ವರದಿಯ ಪ್ರಕಾರ, 2003ರಲ್ಲಿ ಇರಾಕ್ ಮೇಲಿನ ಅಮೆರಿಕ ನೇತೃತ್ವದ ದಾಳಿಗೆ ಬ್ರಿಟನ್ ಕೈಜೋಡಿಸಿದ್ದು, ಶಾಂತಿಯುತ ಆಯ್ಕೆಯ ಅಂಶಗಳನ್ನು ಪರಿಗಣಿಸಿಲ್ಲ. ಕಾನೂನಾತ್ಮಕವಾಗಿ ಸೇನಾ ದಾಳಿಗೆ ಯಾವ ಸಕಾರಣಗಳೂ ಇರಲಿಲ್ಲ. ಇದಕ್ಕೆ ಯೋಜನೆ ಕೂಡಾ ಸಮರ್ಪಕವಾಗಿರಲಿಲ್ಲ ಎಂದು ಆಕ್ಷೇಪಿಸಿದೆ.
ಈ ತನಿಖಾ ಸಮಿತಿಯನ್ನು ನೇಮಿಸಿದ ಏಳು ವರ್ಷಗಳ ಬಳಿಕ ಸಮಿತಿ ವರದಿ ಸಲ್ಲಿಸಿದ್ದು, ಬೈಬಲ್‌ಗಿಂತ ಮೂರು ಪಟ್ಟು ದೊಡ್ಡದಾದ ಅಂದರೆ 26 ಲಕ್ಷ ಶಬ್ದಗಳ ಈ ವಿಸ್ತತ ವರದಿಯಲ್ಲಿ, ಬ್ಲೇರ್ ಹಾಗು ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರು ದಾಳಿ ಬಗೆಗೆ ನಡೆಸಿದ ಸಂಭಾಷಣೆಯನ್ನು ಕೂಡಾ ವಿವರಿಸಲಾಗಿದೆ.
ಇರಾಕ್ ಬಗೆಗಿನ ಬ್ರಿಟಿಷ್ ಸರಕಾರದ ನೀತಿ ಅಸಮರ್ಪಕ ಗುಪ್ತಚರ ವಿಭಾಗದ ಮಾಹಿತಿಯನ್ನು ಆಧರಿಸಿದೆ. ಅದನ್ನು ಯಾರೂ ಪ್ರಶ್ನಿಸಲಿಲ್ಲ. ಇದೀಗ ಅದನ್ನು ಪ್ರಶ್ನಿಸಲೇಬೇಕಾಗುತ್ತದೆ ಎಂದು ತನಿಖಾ ಸಂಸ್ಥೆಯ ಮುಖ್ಯಸ್ಥ ಜಾನ್ ಚಿಲ್ಕೋಟ್ ಸ್ಪಷ್ಟಪಡಿಸಿದ್ದಾರೆ.
ಇರಾಕ್‌ನ ಮೇಲಿನ ದಾಳಿಯ ಬಳಿಕದ ಸಮಸ್ಯೆಯನ್ನು ಮೊದಲೇ ತಿಳಿದುಕೊಳ್ಳಬೇಕಾಗಿತ್ತು ಎನ್ನುವ ಬ್ಲೇರ್ ವಾದವನ್ನು ಸಮಿತಿ ತಳ್ಳಿಹಾಕಿದೆ. ಈ ದಾಳಿಯಿಂದ ಬ್ರಿಟನ್ ಸರಕಾರ ಪಾಠ ಕಲಿಯಬೇಕು. ಇದರಲ್ಲಿ 179 ಬ್ರಿಟಿಷ್ ಸೈನಿಕರು ಮೃತಪಟ್ಟಿದ್ದರು ಎನ್ನುವುದನ್ನು ವರದಿ ಉಲ್ಲೇಖಿಸಿದೆ.







