ವಿಂಬಲ್ಡನ್: ಫೆಡರರ್ ಸೆಮಿಗೆ..ಸಿಲಿಕ್ ಮನೆಗೆ

ವಿಂಬಲ್ಡನ್, ಜು.6: ಮರಿನ್ ಸಿಲಿಕ್ ಅವರ ಸವಾಲನ್ನು 6-7 (4), 4-6, 6-3, 7-6, 6-3 ಅಂತರದಿಂದ ಸೋಲಿಸಿದ ರೋಜರ್ ಫೆಡರರ್, ವಿಂಬಲ್ಡನ್ ಟೂರ್ನಿಯ ಸೆಮಿಫೈನಲ್ ತಲುಪಿದ್ದಾರೆ.
34 ವರ್ಷದ ಫೆಡರರ್ ಏಳು ಬಾರಿ ವಿಂಬಲ್ಡನ್ ಜಯಿಸಿದ್ದು, ದಾಖಲೆ ಸಂಖ್ಯೆಯ ಅಂದರೆ 307 ಗ್ರಾಂಡ್‌ಸ್ಲಾಂ ಪಂದ್ಯಗಳನ್ನು ಗೆದ್ದು, 40ನೆ ಬಾರಿಗೆ ಪ್ರಮುಖ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಮುನ್ನಡೆದರು.
ನಾಟಕೀಯ ತಿರುವು ಪಡೆದ ಪಂದ್ಯದಲ್ಲಿ ಮೊದಲ ಎರಡೂ ಸೆಟ್‌ಗಳಲ್ಲಿ ಸೋಲು ಕಂಡರೂ ಫಿನೀಕ್ಸ್ ಹಕ್ಕಿಯಂತೆ ಮೇಲೆದ್ದ ಫೆಡರರ್, ವಿಂಬಲ್ಡನ್ ಟೂರ್ನಿಯಲ್ಲಿ 84ನೆ ಜಯ ಸಾಧಿಸುವ ಮೂಲಕ ಜಿಮ್ಮಿ ಕಾನ್ನರ್ ಅವರ ದಾಖಲೆ ಸಮಗಟ್ಟಿದರು. ಸೆಮಿಫೈನಲ್‌ನಲ್ಲಿ ಫೆಡರರ್, ಕೆನಡಾದ ಮಿಲೋಸ್ ರವೋನಿಕ್ ಅವರನ್ನು ಎದುರಿಸುವರು. ಈ ಸವಾಲನ್ನು ಸಮರ್ಥವಾಗಿ ಎದುರಿಸಿದರೆ 18ನೆ ಗ್ರಾಂಡ್ ಸ್ಲಾಂ ಪ್ರಶಸ್ತಿ ಹಂತಕ್ಕೆ ಏರಲಿದ್ದಾರೆ. ಇದರ ಜೊತೆಗೆ ಆಲ್ ಇಂಗ್ಲೆಂಡ್ ಕಿರೀಟಕ್ಕೆ ದಾಖಲೆ ಎಂಟನೆ ಬಾರಿಗೆ ಪಾತ್ರರಾಗುವ ಅವಕಾಶ ಪಡೆಯುತ್ತಾರೆ.
ಸೆಂಟರ್‌ಕೋರ್ಟ್‌ನಲ್ಲಿ ನಡೆದ ಈ ರೋಚಕ ಪಂದ್ಯದಲ್ಲಿ ಮೊದಲ ಎರಡು ಸೆಟ್ಟುಗಳನ್ನು ಸೋತು ಪಂದ್ಯ ಗೆದ್ದಿರುವುದು ಅವರ ವೃತ್ತಿ ಜೀವನದಲ್ಲಿ 10ನೆ ಬಾರಿ. ನಾಲ್ಕನೆ ಸೆಟ್‌ನಲ್ಲಿ ಮೂರು ಬಾರಿ ಎದುರಾಳಿಯ ಮ್ಯಾಚ್‌ಪಾಯಿಂಟ್‌ನಿಂದ ಫೆಡರರ್ ಬಚಾವಾದರು. 1974ರಲ್ಲಿ 39 ವರ್ಷದ ಕೆನ್ ರೋಸ್‌ವೆಲ್ ಹೊರತುಪಡಿಸಿ ವಿಂಬಲ್ಡನ್ ಸೆಮೀಸ್ ಹಂತಕ್ಕೆ ಮುನ್ನಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.





