ಅಲಿಗಢ್ ಮುಸ್ಲಿಂ ವಿವಿ ಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಸುಪ್ರೀಂಕೋರ್ಟ್ ಗೆ ಅವಕಾಶ ಇಲ್ಲ : ಕೇಂದ್ರ
ಹೊಸದಿಲ್ಲಿ, ಜು.8: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಧಾರ್ಮಿಕ ಅಲ್ಪಸಂಖ್ಯಾತರ ಸಂಸ್ಥೆ ಎಂಬ ಸ್ಥಾನಮಾನ ನೀಡಲು ಅವಕಾಶ ಇಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ. ವಿವಿಗೆ ಅಲ್ಪಸಂಖ್ಯಾತ ಸಂಸ್ಥೆಯ ಸ್ಥಾನಮಾನ ನೀಡುವ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ಹಿಂದಕ್ಕೆ ಪಡೆದಿದೆ.
ಜನವರಿಯಲ್ಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಎನ್ ಡಿಎ ಸರಕಾರ ಇದೀಗ ಅಧಿಕೃತವಾಗಿ ಅಫಿಡವಿಟ್ ಸಲ್ಲಿಸಿದೆ. ಇಷ್ಟು ವರ್ಷಗಳ ಕಾಲ ತಪ್ಪಾಗಿ ಅರ್ಥೈಸಿಕೊಂಡು ಈ ಸ್ಥಾನಮಾನ ನೀಡಲಾಗಿತ್ತು. ಇದು ಸಂವಿಧಾನದ 30 (1) ವಿಧಿ ಅನ್ವಯ ಹುಟ್ಟುಹಾಕಿದ ಸಂಸ್ಥೆ ಎಂದು ಪ್ರತಿಪಾದಿಸಿದೆ.
ಅಜೀಜ್ ಬಾಷಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗೆ 1967ರಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಲಾಗಿದ್ದು, ಇದು ಶಾಸನಬದ್ಧವಾಗಿ ಹುಟ್ಟುಹಾಕಿದ ಸಂಸ್ಥೆಯೇ ವಿನಃ ಮುಸ್ಲಿಮರಿಂದ ಆರಂಭವಾದ ಸಂಸ್ಥೆಯಲ್ಲ. 1981ರಲ್ಲಿ ಎಎಂಯು ಕಾಯ್ದೆಗೆ ತಿದ್ದುಪಡಿ ತಂದರೂ, 49 ವರ್ಷ ಹಳೆಯ ತೀರ್ಪು ಇಂದಿಗೂ ಪ್ರಸ್ತುತ ಎಂದು ಹೇಳಿದೆ.
ಹಿಂದಿನ ಯುಪಿಎ ಸರಕಾರ, ಎಎಂಯುಗೆ ಅಲ್ಪಸಂಖ್ಯಾತರ ಸಂಸ್ಥೆ ಸ್ಥಾನಮಾನ ನೀಡುವ ಸಂಬಂಧ ತೆಗೆದುಕೊಂಡಿದ್ದ ನಿಲುವಿಗೆ ವಿರುದ್ಧವಾಗಿ ಇದೀಗ ಎನ್ಡಿಎ ಸರಕಾರ ನಿಲುವು ತಳೆದು ಪ್ರಮಾಣಪತ್ರ ಸಲ್ಲಿಸಿದೆ. 2006ರಲ್ಲಿ ಸಲ್ಲಿಸಿದ್ದ ರಜಾಕಾಲದ ಅರ್ಜಿಯನ್ನು ಹಿಂಪಡೆಯಲಾಗಿದ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹೇಳಿದ್ದಾರೆ.
ಇದರ ಜತೆಗೆ ವಿವಿಯಲ್ಲಿ ಮುಸ್ಲಿಮರಿಗೆ ಶೇಕಡ 50ರಷ್ಟು ಮೀಸಲಾತಿ ನೀಡುವ ನಿರ್ಧಾರವನ್ನು ವಾಪಾಸು ಪಡೆಯಲಾಗಿದೆ ಎಂದು ಕೇಂದ್ರ ಹೇಳಿದೆ. 2005ರ ಫೆಬ್ರವರಿ 25ರಂದು, ಶೇಕಡ 50 ಮೀಸಲಾತಿ ನೀಡುವ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕುಲಪತಿಗಳಿಗೆ ಪತ್ರ ಬರೆದಿತ್ತು.