ವಿಮಾನದಲ್ಲಿ ವಿಐಪಿ ಸೇವೆ ನೀಡಿದ್ದಕ್ಕೆ ಕಾಂಗ್ರೆಸ್ ಸಂಸದನಿಂದ ದೂರು !
ಹೀಗೂ ಉಂಟೆ...
ನವದೆಹಲಿ, ಜು.8 : ಮಧ್ಯ ಪ್ರದೇಶದಿಂದ ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯರೊಬ್ಬರು ಸ್ಪೈಸ್ ಜೆಟ್ ವಿಮಾನವೊಂದರಲ್ಲಿ ತಮಗೆ ವಿಐಪಿ ಸೇವೆ ನೀಡಿದ್ದರ ವಿರುದ್ಧ ದೂರು ನೀಡಿ ಏರ್ ಲೈನ್ಸ್ ಸಂಸ್ಥೆ ಸಹಿತ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ರಾಜ್ಯಸಭಾ ಸದಸ್ಯರಾದ ವಿವೇಕ್ ತಂಖಾ ಬುಧವಾರದಂದು ಜಬಲ್ಪುರದಿಂದ ದೆಹಲಿಗೆ ಪ್ರಯಾಣಿಸಿದಾಗ ಅವರಿಗೆ ವಿಮಾನದಲ್ಲಿ ವಿಐಪಿ ಟ್ರೀಟ್ ಮೆಂಟ್ ನೀಡಲಾಗಿತ್ತು. ಆದರೆ ಇದೀಗ ಅವರು ಅದರ ವಿರುದ್ಧ ಸ್ಪೈಸ್ ಜೆಟ್ ಸಂಸ್ಥೆಯ ಪ್ರವರ್ತಕ ಅಜಯ್ ಸಿಂಗ್ ಅವರಲ್ಲಿ ದೂರಿದ್ದಾರೆ.
ತಾನು ಹಾಗೂ ಮಧ್ಯ ಪ್ರದೇಶದ ಇನ್ನೊಬ್ಬ ಸಂಸದ ದೆಹಲಿ ವಿಮಾನ ನಿಲ್ದಾಣದಲ್ಲಿ ಬಸ್ ಒಂದನ್ನು ಏರಿ ಟರ್ಮಿನಲ್ ಬಳಿ ಬಂದಾಗ ತಮ್ಮಿಬ್ಬರನ್ನು ಇಳಿಸಿ ನಂತರ ಉಳಿದವರಿಗೆ ಬಾಗಿಲು ಹಾಕಿ ತಮ್ಮನ್ನು ವಿಮಾನದ ಬಳಿ ಕೊಂಡೊಯ್ಯಲಾಯಿತು,'' ಎಂದು ವಿವೇಕ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
``ಒಬ್ಬ ಸಂಸದನನ್ನು ಇತರ ಸಾಮಾನ್ಯ ಪ್ರಯಾಣಿಕರಂತೆಯೇ ಪರಿಗಣಿಸಬೇಕು. ಇಂತಹ ವಿಶೇಷ ಆತಿಥ್ಯವನ್ನು ಯಾವುದೇ ಸಂಸದ ಅಥವಾ ವಿಐಪಿ, ವಿಐಐಪಿಗೆ ನೀಡುವ ಅಗತ್ಯವಿಲ್ಲ. ಇಂತಹ ಸೇವೆಯಿಂದ ನನಗೆ ತುಂಬಾ ಮುಜುಗರವಾಯಿತು. ನಮಗೆ ಅಥವಾ ಬೇರೆ ಯಾರಿಗಾದರೂ ಇಂತಹ ವಿಐಪಿ ಸೇವೆ ನೀಡಬೇಡಿ ಎಂದು ಸಂಸ್ಥೆಯ ಸಿಬ್ಬಂದಿಗೆ ಸಲಹೆ ನೀಡಿದೆ,'' ಎಂದು ಅವರು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ.
``ವಿಐಪಿ ಆತಿಥ್ಯ ನೀಡದೇ ಹೋದರೆ ಯಾವ ಗಣ್ಯರು ತಮಗೆ ಅವಮಾನವಾಯಿತೆಂದು ತಿಳಿಯುತ್ತಾರೆ ಅಥವಾ ತಿಳಿಯದೇ ಇರುತ್ತಾರೆ ಎಂದು ತಮಗೆ ತಿಳಿಯದು. ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹಾಗೂ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಹೊರತಾಗಿ ಸಾಮಾನ್ಯರಂತೆ ಪ್ರಯಾಣಿಸಲಿಚ್ಛಿಸುವವರು ಬೇರೆ ಯಾರೂ ಇಲ್ಲ,'' ಎಂದು ಏರ್ ಲೈನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.