ಹೊಸಬರಿಗೆ ಮಣೆ, ರಾಮ್ ಶಿಂಧೆಗೆ ಕ್ಯಾಬಿನೆಟ್
ಮಹಾರಾಷ್ಟ್ರ ಸಂಪುಟ ವಿಸ್ತರಣೆ

ಮುಂಬೈ, ಜು.8: ಮಹಾರಾಷ್ಟ್ರ ಮಂತ್ರಿ ಮಂಡಳ ಶುಕ್ರವಾರ ವಿಸ್ತರಣೆ ಗೊಂಡಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 10 ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ಈ ಪೈಕಿ ಬಿಜೆಪಿಯ 6 ಹಾಗೂ ಮಿತ್ರಪಕ್ಷ ಶಿವಸೇನೆಯ ನಾಲ್ವರಿಗೆ ಸಚಿವ ಸ್ಥಾನ ನೀಡಲಾಗಿದೆ. ಓರ್ವ ಕಿರಿಯ ಸಚಿವರಿಗೆ ಕ್ಯಾಬಿನೆಟ್ ಸ್ಥಾನಕ್ಕೆ ಭಡ್ತಿ ನೀಡಲಾಗಿದೆ.
ವಿಧಾನ ಭವನದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಸುಭಾಶ್ ದೇಶ್‌ಮುಖ್(ಸೋಲಾಪುರ), ಜಯಕುಮಾರ್ ರಾವಲ್(ಉತ್ತರ ಮಹಾರಾಷ್ಟ್ರ) ಸಂಭಾಜಿ ನಿಲಂಗೇಕರ್-ಪಾಟೀಲ್(ಮರಾಠವಾಡ) ಹಾಗೂ ಪಾಂಡುರಂಗ ಫಂಡ್ಕರ್(ವಿದರ್ಭ) ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಗೃಹ ರಾಜ್ಯ ಸಚಿ ರಾಮ್ ಶಿಂಧೆ ಅವರನ್ನು ಸಂಪುಟ ದರ್ಜೆ ಸಚಿವರಾಗಿ ಭಡ್ತಿ ನೀಡಲಾಗಿದೆ. ರಾಷ್ಟ್ರೀಯ ಸಮಾಜ ಪಕ್ಷದ ಮಹಾದೇವ್ ಜಾಂಕರ್ ಕೂಡ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಕ್ಯಾಬಿನೆಟ್ ಸೇರ್ಪಡೆಯಾದ ಇತರ ಕಿರಿಯ ಸಚಿವರೆಂದರೆ, ಬಿಜೆಪಿ ಶಾಸಕರಾದ ರವೀಂದ್ರ ಚವಾಣ್(ಥಾಣೆ ಜಿಲ್ಲೆಯ ಡೊಂಬಿವಲಿ), ಮದನ್ ಯೆರಾವರ್(ವಿದರ್ಭ) ಹಾಗೂ ಸ್ವಾಭಿಮಾನ್ ಶೇತ್ಕಾರ್ ಸಂಘಟನೆಯ ಮಾಜಿ ನಾಯಕ, ಶಾಸಕ ಸಹಭಾವು ಖೋಟ್.
ಫಡ್ನವೀಸ್ ಸರಕಾರ ಅಧಿಕಾರಕ್ಕೆ ಬಂದ 21 ತಿಂಗಳ ಬಳಿಕ ಎರಡನೆ ಬಾರಿ ಸಂಪುಟ ವಿಸ್ತರಣೆ ಮಾಡಿದೆ.







