ಸ್ವಿಝರ್ ಲ್ಯಾಂಡ್ : ಬುರ್ಖಾ ನಿಷೇಧ ಧಿಕ್ಕರಿಸಿದ ಮಹಿಳೆಯರು, ಭಾರೀ ದಂಡ

ಬರ್ನೆ, ಜು.8 : ಸ್ವಿಝರ್ ಲ್ಯಾಂಡ್ ದೇಶದ ರಾಜ್ಯವೊಂದರಲ್ಲಿ ಬುರ್ಖಾ ಧರಿಸುವುದನ್ನು ಜುಲೈ 1 ರಿಂದ ನಿಷೇಧಿಸಲಾಗಿದ್ದು ಈ ಆದೇಶವನ್ನು ಉಲ್ಲಂಘಿಸಿದ ಇಬ್ಬರು ಮಹಿಳೆಯರಿಗೆ ಈಗಾಗಲೇ ದಂಡ ವಿಧಿಸಲಾಗಿದೆ. ಟೆಸ್ಸಿನ್ ಕ್ಯಾಂಟನ್ ನ ಲೊಕಾರ್ನೊ ನಗರದಲ್ಲಿ ಕಳೆದ ವಾರ ಇಸ್ಲಾಮಿಕ್ ಸೆಂಟ್ರಲ್ ಕೌನ್ಸಿಲ್ ಸದಸ್ಯೆ ನೊರಾ ಇಲ್ಲಿ ಉದ್ದೇಶಪೂರ್ವಕವಾಗಿ ಈ ನಿಷೇಧ ಉಲ್ಲಂಘಿಸಿದ್ದನ್ನು ಪೊಲೀಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಕೆಗೆ 100 ರಿಂದ 10,000 ಸ್ವಿಸ್ ಫ್ರಾಂಕ್ ದಂಡ ವಿಧಿಸುವ ಸಾಧ್ಯತೆಯಿದೆ. ಅಂತೆಯೇ ಬುರ್ಖಾ ಧರಿಸದೇ ಇದ್ದ ರಾಜಕೀಯ ಕಾರ್ಯಕರ್ತೆ ರಾಚಿದ್ ನೆಕ್ಕಝ್ ಗೆ 200 ಸ್ವಿಸ್ ಫ್ರಾಂಕ್ ದಂಡ ವಿಧಿಸಲಾಗಿದೆ.
ಬುರ್ಖಾ ಆದೇಶ ಉಲ್ಲಂಘಿಸುವವರಿಗೆ 7,890 ಪೌಂಡ್, ಅಂದರೆ ಅಂದಾಜು ರೂ 6.87 ಲಕ್ಷ ದಂಡ ವಿಧಿಸಲಾಗಿದೆ. ಟೆಸ್ಸಿನ್ ಕ್ಯಾಂಟನ್ ನಲ್ಲಿ ಈ ವಿಚಾರವಾಗಿ 2013 ರಲ್ಲಿ ನಡೆದ ಜನ ಮತದಲ್ಲಿ ಶೇ.65 ಮಂದಿ ಬುರ್ಖಾ ನಿಷೇಧವನ್ನು ಬೆಂಬಲಿಸಿದ್ದಾರೆ. ಈ ನಿಷೇಧ ಜಾರಿಯಾದಂದಿನಿಂದ ಸ್ವಿಝರ್ ಲ್ಯಾಂಡ್ ಗೆ ರಜಾ ಕಾಲದಲ್ಲಿ ಭೇಟಿ ನೀಡುವ ತನ್ನ ನಾಗರಿಕರಿಗೆ ಸೌದಿ ಅರೇಬಿಯಾದ ರಾಯಭಾರ ಕಚೇರಿ ಎಚ್ಚರಿಕೆಯಿಂದಿರುವಂತೆ ಹಾಗೂ ಸ್ವಿಝರ್ ಲ್ಯಾಂಡ್ ನಿಯಮಗಳನ್ನು ಪಾಳಿಸುವಂತೆ ಕರೆ ನೀಡಿದೆ.





