ಬಿಜೆಪಿ ನಮ್ಮನ್ನು ವಂಚಿಸಿದೆ:ಮಹಾರಾಷ್ಟ್ರ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ಮೇಟಿ ಆರೋಪ

ಮುಂಬೈ,ಜು.8: ಬಿಜೆಪಿಯು ತನ್ನನ್ನು ವಂಚಿಸಿದೆ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತನ್ನನ್ನು ಸಚಿವನಾಗಿ ಮಾಡುವ ಮಾತನ್ನು ಉಳಿಸಿಕೊಂಡಿಲ್ಲ ಎಂದು ಆಡಳಿತ ಮೈತ್ರಿಕೂಟದ ಪಾಲುದಾರ ಶಿವಸಂಗ್ರಾಮದ ನಾಯಕ ಹಾಗೂ ಶಿವಾಜಿ ಸ್ಮಾರಕ ಯೋಜನಾ ಸಮಿತಿಯ ಅಧ್ಯಕ್ಷ ವಿನಾಯಕ ಮೇಟೆ ಅವರು ಶುಕ್ರವಾರ ಇಲ್ಲಿ ಆರೋಪಿಸಿದರು.
ಹೊಸದಾಗಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರ ಪ್ರಮಾಣವಚನ ಸ್ವೀಕಾರಕ್ಕಾಗಿ ಕರೆಯಲಾಗಿದ್ದ ಮೇಲ್ಮನೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಎಂಎಲ್‌ಸಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಾಗಿದ್ದ ಮೇಟೆ ಗೈರುಹಾಜರಾಗಿದ್ದರು. ಶಿವಾಜಿ ಸ್ಮಾರಕ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಂಪುಟ ದರ್ಜೆ ಸ್ಥಾನಮಾನವನ್ನು ಹೊಂದಿರುವ ಅವರು ಕಳೆದ ತಿಂಗಳು ಬಿಜೆಪಿ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
ರಾಜ್ಯ ಮತ್ತು ಕೇಂದ್ರದಲ್ಲಿ ಸಚಿವರ ನೇಮಕಾತಿಯಲ್ಲಿ ಸ್ವಾಭಿಮಾನಿ ಪಕ್ಷ,ರಾಷ್ಟ್ರೀಯ ಸಮಾಜ ಪಕ್ಷ ಮತ್ತು ಆರ್‌ಪಿಐ ಸೇರಿದಂತೆ ಬಿಜೆಪಿ ನೇತೃತ್ವದ ಮಹಾ ಮೈತ್ರಿಕೂಟದ ಇತರ ಪಾಲುದಾರ ಪಕ್ಷಗಳಿಗೆ ನ್ಯಾಯ ದೊರಕಿದೆ. ಆದರೆ ಇಂದಿನ ಸಂಪುಟ ವಿಸ್ತರಣೆಯಲ್ಲಿ ಶಿವಸಂಗ್ರಾಮವನ್ನು ಕಡೆಗಣಿಸಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮೇಟೆ ಹೇಳಿದರು.
ನಮ್ಮನ್ನೇಕೆ ಕಡೆಗಣಿಸಲಾಗುತ್ತಿದೆ,ನಮಗೆ ಮತ್ತು ಮರಾಠಾ ಸಮುದಾಯಕ್ಕೇಕೆ ಅನ್ಯಾಯವಾಗುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ನಮಗೆ ನಿರಾಶೆಯಾಗಿದೆ ಎಂದರು.







