ಹಾಸನ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಖಂಡಿಸಿ ಬಿಜೆಪಿ ಪ್ರತಿಭಟನೆ
.jpg)
ಹಾಸನ, ಜು.8: ರಾಜ್ಯ ಸರ್ಕಾರವು ಪ್ರಾಮಾಣಿಕ ಅಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳ ತಾಳಲಾರದೆ ಡಿವೈಎಸ್ಪಿ ಎಂ.ಕೆ. ಗಣಪತಿ ಅತ್ಮಹತ್ಯೆ ನಡೆದಿದೆ ಎಂದು ಆರೋಪಿಸಿ, ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಸರಕಾರದ ಎರಡು ವರ್ಷಗಳ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೆಲಸ ಮಾಡುವ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲ ಇಲ್ಲದಂತಾಗಿದೆ. ಅವರಲ್ಲಿ ಡಿ.ಕೆ.ರವಿ, ಮಲ್ಲಿಕಾರ್ಜುನ ಬಂಡೆ, ಕಲ್ಲಪ್ಪಇಂತಹ ದಕ್ಷ ಹಲವಾರು ಅಧಿಕಾರಿಗಳು ಹಿಂಸೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲ ಅಧಿಕಾರಿಗಳು ಸಚಿವರ ಷಂಡ್ಯಂತ್ರಕ್ಕೆ ಬಲಿಯಾಗಿದ್ದಾರೆ.
ಅಧಿಕಾರಿಗಳಾದ ಅನುಪಮಾ ಶಣೈ, ಜಗದೀಶ್‌ರಂತಹ ಅನೇಕ ಪ್ರಾಮಾಣಿಕ ಅಧಿಕಾರಿಗಳು ಸಚಿವರ ಹಿಂಸೆಗೆ ರಾಜಿನಾಮೆ ನೀಡಬೇಕಾಯಿತು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಾಮಾಣಿಕ ಅಧಿಕಾರಿಗಳಿಗೆ ಭಯಮುಕ್ತ, ಹಿಂಸೆ ಮುಕ್ತ ವಾತಾವರಣ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿ, ಸರಕಾರ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಿ ಕಾರಣಕರ್ತ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಉಗ್ರ ಪ್ರತಿಭಟನೆ ಮಾಡುವುದಾಗಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್. ಯೋಗರಮೇಶ್, ತಾಲೂಕು ಅಧ್ಯಕ್ಷ ಅಗಿಲೆ ಯೋಗಿಶ್, ಮುಖಂಡರಾದ ಡಿ.ವೈ.ಗೋಪಾಲ್, ವೇಣುಗೋಪಾಲ್, ನಾಗೇಶ್, ನಗರಾಧ್ಯಕ್ಷ ಶೋಬಾನ್ ಬಾಬು, ಮಂಜುನಾಥ್ ಶರ್ಮ, ಎಸ್.ಡಿ. ಚಂದ್ರು ಇತರರು ಪಾಲ್ಗೊಂಡಿದ್ದರು.







