ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಿಐಡಿ ತನಿಖೆಗೆ ಒತ್ತಾಯ: ವೀರಕನ್ನಡಿಗರ ಸೇನೆಯಿಂದ ಧರಣಿ
.jpg)
ಹಾಸನ, ಜು.8: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಕೂಡಲೇ ಸಿಐಡಿ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವೀರ ಕನ್ನಡಿಗರ ಸೇನೆ ನೇತೃತ್ವದಲ್ಲಿ ಸಚಿವ ಕೆ.ಜೆ. ಜಾರ್ಜ್ ಪ್ರತಿಕೃತಿ ದಹನ ಮಾಡಿ ಧರಣಿ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು ಎನ್.ಆರ್. ವೃತ್ತಕ್ಕೆ ತೆರಳಿ ಸಚಿವ ಕೆ.ಜೆ. ಜಾರ್ಜ್ ಪ್ರತಿಕೃತಿ ದಹಿಸಿದರು.
ರಾಜ್ಯ ಸರಕಾರದ ಪೊಲೀಸ್ ಇಲಾಖೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ದುಡಿಯುತ್ತಿರುವ ಅಧಿಕಾರಿಗಳು ಇತ್ತಿಚಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ. ನಾಲ್ಕು ದಿನಗಳ ಹಿಂದೆಯಷ್ಟೆ ಚಿಕ್ಕಮಗಳೂರಿನ ಡಿವೈಎಸ್ಪಿಯಾಗಿದ್ದ ಕಲ್ಲಪ್ಪ ಹಂಡಿಬಾಗ್ ಅವರು ಮೇಲಾಧಿಕಾರಿ ಎಸ್ಪಿಯ ಕಿರುಕುಳ ಹಾಗೂ ಹಲವು ಪ್ರಕರಣಗಳ ಬಗ್ಗೆ ಒತ್ತಡ ಹೇರಿದ್ದರಿಂದ ಮಾನಸಿಕವಾಗಿ ಹಿಂಸೆ ಅನುವಿಸಿ ಆತ್ಮಹತ್ಯೆಯಂತಹ ದಾರಿ ಹಿಡಿಯಲು ಕಾರಣವಾಗಿದೆ ಎಂದು ದೂರಿದರು. ಮತ್ತೊಬ್ಬ ಪೊಲೀಸ್ ಅಧಿಕಾರಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ.ಕೆ. ಗಣಪತಿ ಕೂಡ ರಾಜಕೀಯ ನಾಯಕರ ಕಿರುಕುಳದಿಂದ ಬೇಸತ್ತು ಬಲಿಪಶುವಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ನಿಷ್ಠಾವಂತರಾಗಿ ದುಡಿಯುವ ಅನೇಕ ಅಧಿಕಾರಿಗಳನ್ನು ಒಂದಲ್ಲ ಒಂದು ನೆಪ ಹೇಳಿ ವರ್ಗಾವಣೆ ಮೂಲಕ ಅವರ ಪ್ರಾಮಾಣಿಕ ಕೆಲಸಕ್ಕೆ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ. ಮುಂದಾದರೂ ಪೊಲೀಸ್ ಇಲಾಖೆಯಾಗಲಿ ಇಲ್ಲವೇ ಸರಕಾರವಾಗಲಿ ಯಾವ ತರಹದ ಒತ್ತಡಕ್ಕೂ ಮಣಿಯದೆ ಕಿರುಕುಳ ನೀಡುವ ಅಂತಹ ವ್ಯಕ್ತಿಗಳ ಮೇಲೆ ಸೂಕ್ತವಾದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಡಿವೈಎಸ್ಪಿಆತ್ಮಹತ್ಯೆ ಪ್ರಕರಣವನ್ನು ತಕ್ಷಣ ಸಿಐಡಿ ತನಿಖೆಗೆ ನೀಡುವಂತೆ ಸರಕಾರವನ್ನು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಜಾನಕಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ವೀರಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷ ದಿನೇಶ್‌ಗೌಡ, ತಾಲೂಕು ಅಧ್ಯಕ್ಷ ಬಿ.ಕೆ. ಯುವರಾಜ್, ಆರ್. ನವೀನ್ ಇತರರು ಇದ್ದರು.







