ಸುಳ್ಯ: ಪೊಲೀಸ್ ಠಾಣೆ ಮೆಟ್ಟಿಲೇರಿದ ಬಸ್ ಟೈಮಿಂಗ್ ವಿವಾದ!

ಸುಳ್ಯ, ಜು.8: ಸುಳ್ಯ-ಕೋಲ್ಚಾರು-ಕನ್ನಡಿತೋಡು ರಸ್ತೆಯಲ್ಲಿ ಬಸ್ ಟೈಮಿಂಗ್ ಕುರಿತು ಕೆಎಸ್ಸಾರ್ಟಿಸಿ ಹಾಗೂ ಗುರೂಜಿ ಟ್ರಾವೆಲ್ಸ್ ಹೆಸರಿನ ಬಸ್ ಸಿಬ್ಬಂದಿಯ ಮಧ್ಯೆ ನಿತ್ಯ ಸಂಘರ್ಷಗಳು ನಡೆಯುತ್ತಿದ್ದು, ವಿವಾದ ಬಗೆಹರಿಸುವ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯಿತು.
ಕೋಲ್ಚಾರು ಬಂದಡ್ಕ ಅಂತಾರಾಜ್ಯ ರಸ್ತೆ ಅಭಿವೃದ್ಧಿಗೊಂಡು ಸಂಚಾರ ಯೋಗ್ಯವಾದ ಬಳಿಕ ಕೆಎಸ್ಸಾರ್ಟಿಸಿಯವರು ಕೋಲ್ಚಾರಿಗೆ ಹೋಗುತ್ತಿದ್ದ ಬಸ್‌ನ್ನು ಕೇರಳ ಗಡಿಭಾಗವಾದ ಕನ್ನಡಿತೋಡಿನವರೆಗೆ ವಿಸ್ತರಿಸಿದ್ದರು.
ಬಡ್ಡಡ್ಕಕ್ಕೆ ಬಸ್ ಓಡಿಸುತ್ತಿದ್ದ ಗುರೂಜಿ ಟ್ರಾವೆಲ್ಸ್‌ನವರೂ ಇದೇ ರಸ್ತೆಯಲ್ಲಿ ಹೊಸ ಪರವಾನಿಗೆ ಪಡೆದು ಬಸ್ ಓಡಿಸಲು ಆರಂಭಿಸಿದರು. ಬಸ್ ಟೈಮಿಂಗ್ ವಿಚಾರವಾಗಿ ಅವರುಗಳ ಮಧ್ಯೆ ಆಗಾಗ ಸಂಘರ್ಷಗಳು ನಡೆಯುತ್ತಿದ್ದವು. ಇದರಿಂದ ಈ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು. ಖಾಸಗಿ ಬಸ್‌ನವರು ಅವರಿಗೆ ನಿಗದಿ ಮಾಡಿದ ವೇಳೆಗೆ ಬಸ್ ಓಡಿಸದೆ ಇರುವ ಕುರಿತು ಸಾರಿಗೆ ಇಲಾಖೆಗೆ ದೂರುಗಳು ಹೋಗಿದ್ದವು.
ಈ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡಲು ಕೆಎಸ್ಸಾರ್ಟಿಸಿ ನಿರಾಕರಿಸಿದ್ದು, ಆಕ್ರೋಶಗೊಂಡ ವಿದ್ಯಾರ್ಥಿಗಳು ಶುಕ್ರವಾರ ಪೊಲೀಸ್ ಠಾಣೆಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಊರಿನ ಮುಖಂಡರು ಸಾರಿಗೆ ಇಲಾಖೆ ಅಧಿಕಾರಿಗಳು, ಬಸ್ ಮಾಲಕರು, ಕೆಎಸ್ಸಾರ್ಟಿಸಿ ಅಧಿಕಾರಿಗಳ ಮಧ್ಯೆ ಎಸೈ ಸಮ್ಮುಖ ಮಾತುಕತೆ ನಡೆಯಿತು. ವಿದ್ಯಾರ್ಥಿಗಳಿಗೆ ಬಸ್‌ಪಾಸ್ ನೀಡುವುದಾಗಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಒಪ್ಪಿಕೊಂಡರು.
ಸಂಜೆ ಮೂರೂ ಮುಕ್ಕಾಲು ಗಂಟೆಗೆ ಅವಿನಾಶ್ ಎಂಬ ಹೆಸರಿನ ಬಸ್ ಸಂಚರಿಸುತ್ತಿದ್ದು, ಗುರೂಜಿ ಬಸ್ ಆರಂಭವಾದ ಬಳಿಕ ಅದು ತನ್ನ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಹಾಗಾಗಿ ಆ ಸಮಯಕ್ಕೆ ಗುರೂಜಿ ಬಸ್‌ನವರು ಸಂಚಾರ ನಡೆಸಬೇಕು ಎಂಬ ಊರವರ ಬೇಡಿಕೆಗೆ ಗುರೂಜಿ ಟ್ರಾವೆಲ್ಸ್‌ನ ಮಾಲಕ ಮೋಹನ್ ಒಪ್ಪಿಗೆ ನೀಡಲಿಲ್ಲ. ಸಂಜೆ ಹಾಗೂ ಬೆಳಿಗ್ಗೆ ಕನ್ನಡಿತೋಡುವರೆಗೆ ಬಸ್ ಓಡಿಸುವುದಾಗಿ ಅವರು ಹೇಳಿದರು.
ಸಾರಿಗೆ ಇಲಾಖೆ ಪರವಾನಿಗೆಯಲ್ಲಿರುವಂತೆ ಅದೇ ಸಮಯಕ್ಕೆ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ಸಂಚರಿಸಬೇಕು. ಸಮಯ ತಪ್ಪಿಸಿ ಸಂಚರಿಸಿದರೆ ಊರಿನವರು ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಎಸೈ ಚಂದ್ರಶೇಖರ ಹೇಳಿದರು. ಖಾಸಗಿ ವಾಹನದಲ್ಲಿ ಪರವಾನಿಗೆ ಇಲ್ಲದೆ ಜನರನ್ನು ಸಾಗಿಸಿದರೆ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.
ಹಿರಿಯ ಮೋಟಾರ್ ವಾಹನ ನಿರೀಕ್ಷಕ ಹರೀಶ್, ಕೆಎಸ್ಸಾರ್ಟಿಸಿ ಪುತ್ತೂರು ಡಿಪೋ ಜ್ಯೂನಿಯರ್ ಅಸಿಸ್ಟೆಂಟ್ ನಾರಾಯಣ ಮಣಿಯಾಣಿ, ಸೂಪರಿಟೆಂಡೆಂಟ್ ನಾಗಾರಾಜ್, ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯರಾದ ಸುದರ್ಶನ ಪಾತಿಕಲ್ಲು, ಗೀತಾ ಕೋಲ್ಚಾರು, ಸ್ಥಳೀಯ ಮುಖಂಡ ಸತ್ಯಕುಮಾರ್ ಆಡಿಂಜ, ಧರ್ಮಪಾಲ ಕೊಯಿಂಗಾಜೆ, ಸೀತಾರಾಮ ಕೊಲ್ಲರಮೂಲೆ, ಚಂದ್ರಶೇಖರ ಕೋಲ್ಚಾರ್, ತೇಜಕುಮಾರ್ ಪೈಂಬೆಚ್ಚಾಲ್, ರಾಧಾಕೃಷ್ಣ ಪರಿವಾರಕಾನ ಮೊದಲಾದವರಿದ್ದರು.







