ಪುತ್ತೂರು: ಕ್ಷುಲ್ಲಕ ವಿಚಾರಕ್ಕೆ ಸಭಾಭವನದ ಮ್ಯಾನೇಜರ್‌ಗೆ ಹಲ್ಲೆ

ಪುತ್ತೂರು, ಜು.8: ಸಭಾಭವನವೊಂದರ ಎದುರು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿದ್ದ ಕಾರೊಂದನ್ನು ತೆರವುಗೊಳಿಸುವಂತೆ ಸೂಚಿಸಿದ ವಿಚಾರದಲ್ಲಿ ಸಭಾಭವನದ ಮ್ಯಾನೇಜರ್‌ಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಘಟನೆ ಶುಕ್ರವಾರ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ನಗರದ ಬೊಳುವಾರು ಎಂಬಲ್ಲಿರುವ ವಿಶ್ವಕರ್ಮ ಸಭಾಭವನದ ಮ್ಯಾನೇಜರ್ ಆಗಿರುವ ಬಂಟ್ವಾಳ ತಾಲೂಕಿನ ಅನಂತಾಡಿ ನಿವಾಸಿ ಕೃಷ್ಣ ಮಣಿಯಾಣಿ (58) ಹಲ್ಲೆಗೊಳಗಾದವರು. ಪುತ್ತೂರಿನಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿರುವ ಬಾಲಕೃಷ್ಣ ಶೆಟ್ಟಿ ಎಂಬಾತ ಹಲ್ಲೆ ನಡೆಸಿದ ಆರೋಪಿ ಎನ್ನಲಾಗಿದೆ.
ಹಲ್ಲೆಗೊಳಗಾದ ಕೃಷ್ಣ ಮಣಿಯಾಣಿ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೊಳುವಾರಿನ ವಿಶ್ವಕರ್ಮ ಸಭಾಭವನದಲ್ಲಿ ಶುಕ್ರವಾರ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಆ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಬಾಲಕೃಷ್ಣ ಶೆಟ್ಟಿ ತನ್ನ ಕಾರನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು. ಇದರಿಂದಾಗಿ ಸಭಾಭವನಕ್ಕೆ ತೆರಳುವವರಿಗೆ ಸಮಸ್ಯೆಯಾಗುತ್ತದೆ ಎಂದು ಮ್ಯಾನೇಜರ್ ಕೃಷ್ಣ ಮಣಿಯಾಣಿ ಅವರು ರಸ್ತೆಗೆ ಅಡ್ಡವಾಗಿ ನಿಲ್ಲಿಸಲಾಗಿದ್ದ ಕಾರನ್ನು ತೆರವುಗೊಳಿಸುವಂತೆ ಮೈಕ್ ಅನೌನ್ಸ್ ಮೂಲಕ ವಿನಂತಿಸಿಕೊಂಡಿದ್ದರೆನ್ನಲಾಗಿದೆ.
ಇದರಿಂದಾಗಿ ಆಕ್ರೋಶಗೊಂಡ ಕಾರು ಚಾಲಕ ಬಾಲಕೃಷ್ಣ ಶೆಟ್ಟಿ ಸಭಾಭವನದ ಮ್ಯಾನೇಜರ್ ಕೊಠಡಿಗೆ ಅಕ್ರಮವಾಗಿ ಪ್ರವೇಶಿಸಿ, ಅಲ್ಲಿದ್ದ ಕೃಷ್ಣ ಮಣಿಯಾಣಿ ಅವರನ್ನು ಕೊಠಡಿಯಿಂದ ಹೊರಗೆ ಎಳೆದುಕೊಂಡು ಬಂದು ಸಾರ್ವಜನಿಕರ ಎದುರೇ ಕೈಯಿಂದ ಅವರ ತಲೆಯ ಮತ್ತು ದೇಹದ ಇತರ ಭಾಗಗಳಿಗೆ ಹೊಡೆದು ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಲಾಗಿದೆ. ಪ್ರಕರಣದ ಕುರಿತು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಲಾಗಿದೆ.







