ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ಪರಿಷ್ಕರಣೆ ಸಲಹಾ ಸಮಿತಿಯಿಂದ ಸಿಎಂಗೆ ಕರಡು ಮನವಿ ಸಲ್ಲಿಕೆ

ಬೆಂಗಳೂರು, ಜು.8: ಕರ್ನಾಟಕ ಮೌಢ್ಯಾಚರಣೆ ಪ್ರತಿಬಂಧಕ ಕಾನೂನು ಪರಿಷ್ಕರಣ ಸಲಹಾ ಸಮಿತಿಯು ನ್ಯಾಯಮೂರ್ತಿ ಶಿವರಾಜ್ ಪಾಟೀಲ್‌ರ ನೇತೃತ್ವದಲ್ಲಿ ರಚಿಸಿರುವ ಮೌಢ್ಯಾಚರಣೆ ಪ್ರತಿಬಂಧಕ ಕಾನೂನಿನ ಕರಡು ಮನವಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸಲ್ಲಿಸಲಾಯಿತು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಮೌಢ್ಯಾಚಾರಣೆ ಪ್ರತಿಬಂಧಕ ಕಾಯ್ದೆಯನ್ನು ತರಲು ನಮ್ಮ ಸರಕಾರ ಬದ್ಧವಾಗಿದೆ. ಎಲ್ಲರ ವಿಶ್ವಾಸ ಪಡೆದು ಈ ಕಾಯ್ದೆಯನ್ನು ಜಾರಿಗೊಳಿಸಲಾಗುವುದು. ಜನತೆಯ ಧಾರ್ಮಿಕ ಭಾವನೆ ಆಚರಣೆಗಳಿಗೆ ಕುಂದು ಆಗದಂತಹ ರೀತಿಯಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗುವುದು. ಜೀವಹಾನಿ ಮತ್ತು ಮಾನವ ಘನತೆಗೆ ವಿರುದ್ಧವಾಗಿರುವ ಮೌಢ್ಯಾಚರಣೆಗಳನ್ನು ನಿಯಂತ್ರಿಸಲು ಕಾನೂನು ರೂಪಿಸುವ ಉದ್ದೇಶ ನಮ್ಮದಾಗಿದೆ. ಸಮಿತಿ ನೀಡಿರುವ ಕರಡಿನ ಜೀವಪರ ಅಂಶಗಳನ್ನು ಪರಿಗಣಿಸುತ್ತೇವೆಂದು ಹೇಳಿದರು.
ಈ ಸಂದರ್ಭ ನಿಯೋಗದಲ್ಲಿ ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಡಾ.ಕೆ.ಮರುಳ ಸಿದ್ದಪ್ಪ, ಪ್ರೊ. ಬರಗೂರು ರಾಮಚಂದ್ರಪ್ಪ, ಡಾ. ಸಿ.ಆರ್.ಚಂದ್ರಶೇಖರ್, ಜಿ.ಎನ್.ನಾಗರಾಜ್, ಸಿದ್ದನಗೌಡ ಪಾಟೀಲ್, ಮಾವಳ್ಳಿ ಶಂಕರ್, ಎನ್. ಅನಂತ್ ನಾಯಕ್, ಬಿ.ರಾಜಶೇಖರಮೂರ್ತಿ, ಭೈರರಾಜು ಉಪಸ್ಥಿತರಿದ್ದರು.





