ಕುಡಿಯುವ ನೀರಿಗೆ ಆಗ್ರಹ: ಪಂಚಾಯತ್ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ

ಪುತ್ತೂರು, ಜು.8: ಕಳೆದ 6 ತಿಂಗಳಿನಿಂದ ಕುಡಿಯಲು ನೀರು ಇಲ್ಲದೆ ಗ್ರಾಮದ ಅಲಂಗೂರು ನಿವಾಸಿಗಳು ತೊಂದರೆ ಪಡುತ್ತಿದ್ದು, ಗ್ರಾಮ ಪಂಚಾಯತ್ ಅಧಿಕಾರಿಗಳು ಸಮಸ್ಯೆಗೆ ಸ್ಪಂದನೆ ನೀಡುತ್ತಿಲ್ಲ ಎಂದು ಆರೋಪಿಸಿ ಶುಕ್ರವಾರ ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಒಳಮೊಗ್ರು ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.
ಒಳಮೊಗ್ರು ಗ್ರಾಪಂ ಮಾಜಿ ಗ್ರಾಪಂ ಸದಸ್ಯರಾದ ಇಸುಬು ಮೈದಾನಿಮೂಲೆ, ರಕ್ಷಿತ್ ರೈ ಮುಗೇರು ಹಾಗೂ ವಿನೋದ್ ಶೆಟ್ಟಿ ಮುಗೇರು ನೇತೃತ್ವದಲ್ಲಿ ಮುತ್ತಿಗೆ ನಡೆಸಲಾಯಿತು.
ಗ್ರಾಮದ ಅಲಂಗೂರು ಪರಿಸರದಲ್ಲಿ ಕಳೆದ 6 ತಿಂಗಳಿನಿಂದ ನೀರು ಇಲ್ಲ. ಈ ಭಾಗದಲ್ಲಿ ಸುಮಾರು 14 ಮನೆಗಳಿದೆ. ಕೊರಗ ಸಮುದಾಯದ ಕಾಲನಿಯೂ ಇದೆ. ಇವರಿಗೆ ಗ್ರಾಪಂ ನಳ್ಳಿ ನೀರು ಬಿಟ್ಟರೆ ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ಇಲ್ಲ. ನಳ್ಳಿ ನೀರು ಬಾರದೇ ಇದ್ದರೆ ಒಂದು ಕಿ.ಮೀ. ದೂರದಿಂದ ಇವರು ನೀರು ಹೊತ್ತು ತರಬೇಕಾದ ಸ್ಥಿತಿ ಇದೆ. ಬೇಸಿಗೆಯಲ್ಲಿ ವಿದ್ಯುತ್ ಮತ್ತು ನೀರಿನ ಕೊರತೆಯ ಕಾರಣದಿಂದ ಇಲ್ಲಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ಇದೀಗ ಮಳೆಗಾಲದಲ್ಲಿ ನೀರಿನ ವ್ಯವಸ್ಥೆ ಮಾಡುವಲ್ಲಿ ಗ್ರಾಪಂ ನಿರ್ಲಕ್ಷ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಧರಣಿ ನಿರತ ಪ್ರತಿಭಟನಾಕಾರರು ನೀರು ಬಿಡುವ ಹಮೀದ್ ಎಂಬವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ನೀರು ಸರಬರಾಜು ಮಾಡುವ ಮುಖ್ಯ ಪೈಪಿಗೆ ಗೇಟ್‌ವಾಲ್ ಹಾಕುವ ಮೂಲಕ ನಮಗೆ ನೀರು ಸಿಗದಂತೆ ತಡೆ ಒಡ್ಡಿದ್ದಾರೆ. ಅವರ ವಿರುದ್ಧ ಗ್ರಾ.ಪಂ. ಶಿಸ್ತು ಕ್ರಮಕೈಗೊಳ್ಳಬೇಕು ಅಥವಾ ಅವರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು. ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಪಿಡಿಒ ಅವರಿಗೆ ಮನವಿ ಮಾಡಿದ್ದರೂ ನಮ್ಮ ಸಮಸ್ಯೆಯನ್ನು ಆಲಿಸಲು ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದ ಪಿಡಿಒ, 6 ತಿಂಗಳು ಕಳೆದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಲಲಿತಾ, ಮೊಯ್ದೀನ್, ನಾರಾಯಣ ಪೂಜಾರಿ, ಉಕ್ರಪ್ಪ, ಐತ, ಬಾಬು, ರಮೇಶ್, ಪುರುಷೋತ್ತಮ, ಶೀನಪ್ಪ, ಚನಿಯಾರು, ಇಬ್ರಾಹೀಂ, ಸೀತಕ್ಕ, ಭಾಗಿ, ಸಹದ್, ಸಂದೇಶ, ಲತಾ, ದೀಪಕ್, ಪ್ರೇಮ, ಝುಹುರಾ, ಜಯರಾಂ ಮೊಯಿದುಕುಟ್ಟಿ, ಎಸ್. ಎಂ. ಮುಹಮ್ಮದ್ ಕುಂಬ್ರ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಗೆ ಮಣಿದ ಗ್ರಾ.ಪಂ. ಅಧ್ಯಕ್ಷರು ತಕ್ಷಣವೇ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ನೀಡಿದರು.







