ಸ್ವಯಂಕೃತ ಅಪರಾಧಗಳಿಗೆ ಡಿವೈಎಸ್ಪಿ ಗಣಪತಿ ಬಲಿಯಾದರೇ?
ಬೆಂಗಳೂರು, ಜು. 8: ಡಿವೈಎಸ್ಪಿ ಎಂ.ಕೆ.ಗಣಪತಿ ನಿಗೂಢ ಆತ್ಮಹತ್ಯೆ ಪ್ರಕರಣ ಕ್ಷ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಅವರ ಸ್ವಯಂಕೃತ ಅಪರಾಧ ಹಾಗೂ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಆರೇಳು ಭಾರಿ ಅಮಾನತುಗೊಂಡಿರುವುದು ಬೆಳಕಿಗೆ ಬಂದಿದೆ.
ಕಳವು, ದರೋಡೆಯಂತಹ ಸಣ್ಣ ಪ್ರಮಾಣದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪ್ರಶಾಂತ್ ಯಾನೆ ಪಚ್ಚಿ ಎಂಬವನ ಎನ್‌ಕೌಂಟರ್ ಪ್ರಕರಣದಲ್ಲಿ ಕರ್ತವ್ಯ ಲೋಪವೆಸಗಿ 2012ರಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಡಿವೈಎಸ್ಪಿ ಗಣಪತಿ ಅಮಾನತುಗೊಂಡಿದ್ದರು.
ಪ್ರಶಾಂತ್ ಎನ್‌ಕೌಂಟರ್ ಮಾಡುವ ಉದ್ದೇಶದಿಂದ ಆತನ ವಿರುದ್ಧ ಉದ್ದೇಶಪೂರ್ವಕವಾಗಿಯೇ ಗಣಪತಿ ರೌಡಿಪಟ್ಟಿ ಸಿದ್ಧಪಡಿಸಿದ್ದರು ಎಂದು ಪ್ರಶಾಂತ್ ಕುಟುಂಬದ ಸದಸ್ಯರಿಂದ ಆರೋಪವೂ ಕೇಳಿಬಂದಿತ್ತು.
2011ರಲ್ಲಿ ರಾಜಗೋಪಾಲನಗರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಎಂ.ಕೆ.ಗಣಪತಿ, ಕಳವು ಪ್ರಕರಣವೊಂದರಲ್ಲಿ 1ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ವಶಪಡಿಸಿಕೊಂಡು, ಕೇವಲ 20ಲಕ್ಷ ರೂ.ಗಳನ್ನು ತೋರಿಸಿದ್ದರು. ಈ ಬಗ್ಗೆ ತನಿಖೆ ಬಳಿಕ ಗಣಪತಿ ಅವರನ್ನು ಅಮಾನತುಗೊಳಿಸಲಾಗಿತ್ತು.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಗಣಪತಿ ಅಲ್ಲಿನ ಗಾರೆಭಾವಿ ಪಾಳ್ಯದಲ್ಲಿ ಗಲಭೆಯೊಂದರ ಮುನ್ಸೂಚನೆಯಿದ್ದರೂ, ಅಗತ್ಯ ಮುನ್ನಚ್ಚರಿಕೆ ಕೈಗೊಳ್ಳದೆ ಕರ್ತವ್ಯ ಲೋಪವೆಸಗಿದ್ದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು ಎಂದು ಪೊಲೀಸ್ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ.
2008ರಲ್ಲಿ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಗಣಪತಿ, ಅಲ್ಲಿನ ಕುಲಶೇಖರ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಪೊಲೀಸರೊಂದಿಗೆ ಪ್ರಾರ್ಥನಾ ಮಂದರಕ್ಕೆ ನುಗ್ಗಿ ಮಕ್ಕಳು, ಮಹಿಳೆಯರನ್ನು ಲೆಕ್ಕಿಸದೆ ಲಾಠಿ ಪ್ರಹಾರ ನಡೆಸಿದ್ದರು. ಆ ಪ್ರಕರಣದ ತನಿಖೆಯ ಬಳಿಕ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು ಎಂದು ತಿಳಿದುಬಂದಿದೆ.