ಅಮೆರಿಕದ ಪೊಲೀಸರು ಸುಧಾರಣೆಗೊಳ್ಳಬೇಕು ಒಬಾಮ: ಕರಿಯರ ಮೇಲೆ ನಿರಂತರ ದಾಳಿ ಹಿನ್ನೆಲೆ

ವಾರ್ಸಾ (ಪೋಲ್ಯಾಂಡ್), ಜು. 8: ಅಮೆರಿಕದಲ್ಲಿ ಪೊಲೀಸ್ ಅಧಿಕಾರಿಗಳಿಂದ ಇನ್ನೋರ್ವ ಕರಿಯ ವ್ಯಕ್ತಿ ಹತ್ಯೆಗೀಡಾಗಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ಅಮೆರಿಕದ ಪೊಲೀಸ್ ಇಲಾಖೆಗಳು ಸುಧಾರಣೆಯತ್ತ ವೇಗವಾಗಿ ಸಾಗಬೇಕು ಎಂದು ಗುರುವಾರ ಹೇಳಿದ್ದಾರೆ.
ಮಿನಸೋಟದಲ್ಲಿ ಪೊಲೀಸರಿಂದ ಹತ್ಯೆಗೀಡಾದ ಕರಿಯ ವಾಹನ ಚಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದ ಒಬಾಮ, ಇಂಥ ದುರಂತಗಳಿಗೆ ದೇಶ ತುಂಬಾ ಸಲ ಸಾಕ್ಷಿಯಾಗಿದೆ ಎಂದರು.
ಬಿಳಿಯೇತರ ಅಮೆರಿಕನ್ನರನ್ನು ಪೊಲೀಸರು ಎಳೆದಾಡುವ, ಶೋಧಿಸುವ ಹಾಗೂ ಅವರಿಗೆ ಗುಂಡು ಹಾರಿಸುವ ಪ್ರಕರಣಗಳು ಪದೇ ಪದೇ ನಡೆಯುತ್ತಿದೆ ಎಂದು ಹೇಳಿದ ಅವರು, ಇದನ್ನು ಅಪರೂಪದ ಘಟನೆಯೆಂಬಂತೆ ಭಾವಿಸಬೇಡಿ ಎಂಬುದಾಗಿ ಬಿಳಿಯ ಅಮೆರಿಕನ್ನರಿಗೆ ಮನವಿ ಮಾಡಿದರು.
‘‘ಇದೊಂದು ಕೇವಲ ಕರಿಯರ ವಿಷಯವಲ್ಲ. ಇದು ಕೇವಲ ಹಿಸ್ಪಾನಿಕ್‌ಗಳಿಗೆ ಸಂಬಂಧಿಸಿದ ವಿಷಯವಲ್ಲ. ಇದೊಂದು ಅಮೆರಿಕಕ್ಕೆ ಸಂಬಂಧಪಟ್ಟ ವಿಷಯ. ಇದರ ಬಗ್ಗೆ ನಾವೆಲ್ಲ ಗಮನ ಹರಿಸಬೇಕು’’ ಎಂದು ನ್ಯಾಟೊ ಶೃಂಗ ಸಮ್ಮೇಳನಕ್ಕಾಗಿ ವಾರ್ಸಾಗೆ ಆಗಮಿಸಿದ ಒಬಾಮ ಅವಸರವಸರವಾಗಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಹೇಳಿದರು.
‘‘ನ್ಯಾಯೋಚಿತ ಮನಸ್ಸಿನ ಎಲ್ಲರೂ ಈ ಬಗ್ಗೆ ಗಮನ ಹರಿಸಬೇಕು. ಇದಕ್ಕಿಂತ ಹೆಚ್ಚಿನದನ್ನು ಮಾಡಲು ನಮಗೆ ಸಾಧ್ಯವಿದೆ ಹಾಗೂ ಇದಕ್ಕಿಂತ ನಾವು ಉತ್ತಮರಾಗಿದ್ದೇವೆ ಎಂಬುದನ್ನು ಹೇಳುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’’ ಎಂದರು.
ಅಮೆರಿಕದ ಮಿನಸೋಟ ರಾಜ್ಯದ ಸೇಂಟ್ ಪೌಲ್‌ನಲ್ಲಿ ಗುರುವಾರ ಫಿಲಾಂಡೊ ಕ್ಯಾಸ್ಟೈಲ್ ತನ್ನ ಚಾಲನಾ ಪರವಾನಿಗೆಯನ್ನು ತೆಗೆಯುತ್ತಿದ್ದಾಗ ಪೊಲೀಸ್ ಅಧಿಕಾರಿ ಗುಂಡು ಹಾರಿಸಿದ್ದಾರೆ ಎಂದು ಆತನ ಸ್ನೇಹಿತೆ ಲ್ಯಾವಿಶ್ ರಿನಾಲ್ಡ್ಸ್ ಆರೋಪಿಸಿದ್ದಾರೆ.
ಇದಕ್ಕಿಂತ ಒಂದು ದಿನ ಮೊದಲು ಮಂಗಳವಾರ ಬ್ಯಾಟನ್ ರೋಗ್‌ನಲ್ಲಿ ಆ್ಯಲ್ಟನ್ ಸ್ಟರ್ಲಿಂಗ್ ಎಂಬ ಕರಿಯ ವ್ಯಕ್ತಿಯನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದರು.
ಸ್ಟರ್ಲಿಂಗ್ ಹತ್ಯೆಯನ್ನು ವಿರೋಧಿಸಿ ನೂರಾರು ಮಂದಿ ಎರಡು ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಸೇಂಟ್ ಪೌಲ್‌ನ ಉಪನಗರ ಫಾಲ್ಕನ್ ಹೈಟ್ಸ್‌ನಲ್ಲಿ ಪೊಲೀಸರು ಕ್ಯಾಸ್ಟೈಲ್‌ರ ಕಾರ್‌ನ ತಪಾಸಣೆ ನಡೆಸುತ್ತಿದ್ದಾಗ ಘಟನೆ ಸಂಭವಿಸಿತ್ತು.
‘‘ನೀವು ಅವರಿಗೆ ನಾಲ್ಕು ಗುಂಡುಗಳನ್ನು ಹೊಡೆದಿರಿ, ಸರ್. ಅವರು ತನ್ನ ಚಾಲನಾ ಪರವಾನಿಗೆ ಮತ್ತು ನೋಂದಣಿ ದಾಖಲೆಗಳನ್ನು ತೆಗೆಯುತ್ತಿದ್ದರು, ಅಷ್ಟೆ ಸರ್’’ ಎಂದು ಲೈವ್ ಸ್ಟ್ರೀಮ್ ವೀಡಿಯೊ ಒಂದರಲ್ಲಿ ಮೃತ ವ್ಯಕ್ತಿಯ ಸ್ನೇಹಿತೆ ರಿನಾಲ್ಡ್ಸ್ ಹೇಳಿದ್ದಾರೆ.





