ಕ್ಷೇತ್ರದ ಅಭಿವೃದ್ಧಿಗೆ ಆಗ್ರಹಿಸಿ ಜೆಡಿಎಸ್‌ನಿಂದ ಡಿಸಿಗೆ ಮನವಿ

ಕಾರವಾರ, ಜು.8: ಕ್ಷೇತ್ರದ ಅಭಿವೃದ್ಧಿಗೆ ಆಗ್ರಹಿಸಿ ಜೆಡಿಎಸ್ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಎಸ್.ಎಸ್.ನಕೂಲ ಅವರಿಗೆ ಮನವಿ ಸಲ್ಲಿಸಿದರು. ಕಾರವಾರ ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿ ಶೀಘ್ರವೇ ಪೂರ್ಣಗೊಳ್ಳುವಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೋಣೆನಾಲದ ಕೊಳಚೆ ನೀರಿನ ಸಮಸ್ಯೆ ಕಾರವಾರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದು, ಇದಕ್ಕೆ ಶಾಶ್ವತ ಯೋಜನೆ ರೂಪಿಸಬೇಕು. ಕೋಡಿಭಾಗ ರಸ್ತೆ ಅಗಲೀಕರಣ ವಿವಾದವನ್ನು ಬಗೆಹರಿಸಬೇಕು. ರಸ್ತೆ ಅಗಲೀಕರಣ ವಿಷಯದಲ್ಲಿ ಆದ ತಾರತಮ್ಯವನ್ನು ಹೋಗಲಾಡಿಸಬೇಕು. ಇದಲ್ಲದೇ ತಾಲೂಕಿನಲ್ಲಿನ ಅಸಮರ್ಪಕ ವಿದ್ಯುತ್ ಪೂರೈಕೆ, ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಕಾರವಾರದ ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರವಾಗಿದ್ದರೂ ಜಿಲ್ಲೆಗೆ ಸೂಕ್ತ ವಿದ್ಯುತ್ ದೊರೆಯುತ್ತಿಲ್ಲ. ಗ್ರಾಮೀಣ ಭಾಗದ ಜನ ಕತ್ತಲೆಯಲ್ಲಿ ಬದುಕುತ್ತಿದ್ದಾರೆ. ಅಸಮರ್ಪಕ ವಿದ್ಯುತ್ ಕಡಿತದಿಂದ ಜನ ಬೇಸತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ವಿವಿಧ ತಾಲೂಕುಗಳಿಂದ ರೋಗಿಗಳು ಬರುತ್ತಿದ್ದು ಅವರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇನ್ನು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ. ಸರಕಾರ ಸಾಕಷ್ಟು ಖರ್ಚು ಮಾಡಿದರೂ ಜನರಿಗೆ ಯೋಗ್ಯ ನೀರು ಸಿಗುತ್ತಿಲ್ಲ ಎಂದು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ನೌಕಾನೆಲೆ, ಕೈಗಾ ಅಣುಸ್ಥಾವರ ಸೇರಿದಂತೆ ವಿವಿಧ ಯೋಜನೆಗಳಿಂದ ನಿರಾಶ್ರಿತರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ರೈತಾಪಿ ವರ್ಗಗಳನ್ನು ಇಲ್ಲಿ ಕಡೆಗಣಿಸಲಾಗಿದ್ದರಿಂದ ಸಾವಿರಾರು ಎಕರೆ ಭೂಮಿ ಹಾಳಾಗಿದೆ. ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ದುಡಿಯುವ ಕೈಗಳಿಗೆ ಕೆಲಸ ಒದಗಿಸಬೇಕು ಎಂದು ಮನವಿ ಮಾಡಿದರು. ಇದರ ಜೊತೆ ಗ್ರಾಮೀಣ ಭಾಗಕ್ಕೆ ಬಿಡುಗಡೆಯಾಗುವ ಅನುದಾನಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದ್ದು, ಇದನ್ನು ತಡೆಯಬೇಕು. ಭ್ರಷ್ಟಾಚಾರ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಜೆಡಿಎಸ್ ಮುಖಂಡ ಪುರುಷೋತ್ತಮ ಸಾವಂತರಿಂದ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿದರು. ಪ್ರಮುಖರಾದ ಖಲೀಲುಲ್ಲಾ ಶೇಖ್, ಪಕ್ಷದ ತಾಲೂಕಾಧ್ಯಕ್ಷ ಅಜಿತ್ ಪೊಕಳೆ ಉಪಸ್ಥಿತರಿದ್ದರು.







