ವಿವಿಧೆಡೆ ಹಲವು ಸಂಘಟನೆಗಳಿಂದ ಪ್ರತಿಭಟನೆ
ಡಿವೆಎಸ್ಪಿ ಆತ್ಮಹತ್ಯೆ ಪ್ರಕರಣ:ಕಾರಣಕರ್ತರ ವಿರುದ್ಧ ಕ್ರಮಕ್ಕೆ ಆಗ್ರಹ
ಶಿವಮೊಗ್ಗ, ಜು. 8: ಮಂಗಳೂರಿನ ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೊಪ್ಪಿಸಬೇಕು. ತಪ್ಪಿತಸ್ಥರ ವಿರುದ್ಧ್ದ ಕಠಿಣ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ನ್ಯಾಷನಲ್ ಹ್ಯೂಮನ್ ರೈಟ್ಸ್ ಡಿಪೆಂಡರ್ಸ್ ಕೌನ್ಸಿಲ್, ಬಿಜೆಪಿ, ಜಯ ಕರ್ನಾಟಕ ಹಾಗೂ ನವ ಕರ್ನಾಟಕ ನಿರ್ಮಾಣ ವೇದಿಕೆ ಸಂಘಟನೆಗಳು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರ ಅರ್ಪಿಸಿದವು.
ಕೌನ್ಸಿಲ್: ನ್ಯಾಷನಲ್ ಹ್ಯೂಮನ್ ರೈಟ್ಸ್ ಡಿಪೆಂಡರ್ಸ್ ಕೌನ್ಸಿಲ್ ಸಂಘಟನೆ ಪ್ರತಿಭಟನೆ ನಡೆಸಿ, ಮಂಗಳೂರು ಐಜಿ ಕಚೇರಿಯಲ್ಲಿ ಡಿವೈಎಸ್ಪಿಯಾಗಿದ್ದ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕು. ಆತ್ಮಹತ್ಯೆಗೆ ಕಾರಣಕರ್ತರಾದ ಸಚಿವ ಕೆ.ಜೆ.ಜಾರ್ಜ್, ಗುಪ್ತದಳದ ಅಧಿಕಾರಿ ಎ.ಎಂ.ಪ್ರಸಾದ್ ಹಾಗೂ ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಂತಿ ಅವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಉಪಾಧ್ಯಕ್ಷರಾದ ಎಸ್.ಮಂಜುನಾಥ್ ಮತ್ತಿತರರಿದ್ದರು.
ಬಿಜೆಪಿ: ರಾಜ್ಯದಲ್ಲಿ ಕೆಎಎಸ್, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಲು ಆಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಕಿರಿಯ ಅಧಿಕಾರಿಗಳು ಆತ್ಮಹತ್ಯೆ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ಇನ್ನೂ ಕೆಲವರು ರೌಡಿಗಳ ಕೈಯಲಿ ಸಿಕ್ಕಿ ಸಾವನ್ನಪ್ಪುತ್ತಿದ್ದಾರೆ. ಸರಕಾರ ಇಂತಹ ಅಧಿಕಾರಿಗಳು, ಗೂಂಡಾಗಿರಿ ಮಾಡುತ್ತಿರುವ ಸಮಾಜ ಘಾತುಕರ ಬೆನ್ನಿಗೆ ನಿಂತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಬೇಕು ಎಂದು ಬಿಜೆಪಿ ಪಕ್ಷ ಆಗ್ರಹಿಸಿದೆ. ಜಯ ಕರ್ನಾಟಕ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸರಕಾರಕ್ಕೆ ಕೆಟ್ಟ ಹೆಸರು ತಂದಿದೆ. ಆತ್ಮಹತ್ಯೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಪ್ರಾಮಾಣಿಕ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ. ವೇದಿಕೆ: ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಕಾರಣರಾದ ಸಚಿವ ಮತ್ತು ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇವರ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿಸಬೇಕು ಎಂದು ನವ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹಿಸಿದೆ. ವನಮಹೋತ್ಸವ ಕಾರ್ಯಕ್ರಮ
ಶಿಕಾರಿಪುರ: ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳು ಸೇವೆ ಸಲ್ಲಿಸುವುದು ಕಷ್ಟಕರ
ಶಿಕಾರಿಪುರ,ಜು.8: ರಾಜ್ಯದ ಸಚಿವರು, ಹಿರಿಯ ಅಧಿಕಾರಿಗಳ ಕಿರುಕುಳ ತಾಳಲಾರದೆ ನಿಷ್ಠಾವಂತ ಪೋಲಿಸ್ ಅಧಿಕಾರಿಗಳು ಆತ್ಮಹತ್ಯೆಯಂತಹ ಹೇಯ ಕೃತ್ಯಕ್ಕೆ ಮುಂದಾಗುತ್ತಿದ್ದು, ಪೋಲಿಸ್ ಅಧಿಕಾರಿಗಳ ಪಾಡು ಹೀಗೆ ಮುಂದುವರಿದರೆ ಜನಸಾಮಾನ್ಯರ ಗತಿ ಏನು ಎಂದು ತಾಲೂಕು ಎಬಿವಿಪಿ ಪ್ರಧಾನ ಕಾರ್ಯದರ್ಶಿ ಬೆಣ್ಣೆ ಸುನೀಲ್ ಹೇಳಿದರು.
ಶುಕ್ರವಾರ ಎಬಿವಿಪಿ ನೇತೃತ್ವದಲ್ಲಿ ವಿವಿಧ ಸರಕಾರಿ ಕಾಲೇಜುಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರು ದಕ್ಷ ಅಧಿಕಾರಿಗಳ ಆತ್ಮಹತ್ಯೆಗೆ ಕಾರಣರಾದ ಸಚಿವರು, ಹಿರಿಯ ಅಧಿಕಾರಿಗಳ ವಿರುದ್ಧ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರಕಾರಿ ಸೇವೆಯಲ್ಲಿನ ನಿಷ್ಠಾವಂತ ಅಧಿಕಾರಿಗಳಿಗೆ ಅನಗತ್ಯ ಕಿರುಕುಳ,ಒತ್ತಡದಿಂದಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಅಸಾಧ್ಯವಾದ ವಾತಾವರಣವನ್ನು ಸಚಿವರು, ಹಿರಿಯ ಅಧಿಕಾರಿಗಳು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಐಎಎಸ್ ಅಧಿಕಾರಿ ಡಿ.ಕೆ ರವಿ, ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ರವರ ಸಾವಿನ ಜೊತೆಗೆ ಇದೀಗ ಡಿವೈಎಸ್ಪಿ ಕಲ್ಲಪ್ಪ ಹಾಗೂ ಗಣಪತಿ ಆತ್ಮಹತ್ಯೆಗೆ ಶರಣಾಗುವ ಸ್ಥಿತಿಯನ್ನು ಸೃಷ್ಟಿಸಲಾಗಿದೆ.ರಾಜ್ಯದಲ್ಲಿ ನಿಷ್ಠಾವಂತ ಅಧಿಕಾರಿಗಳು ಸೇವೆ ಸಲ್ಲಿಸುವುದು ಕಷ್ಟಕರವಾಗಿದೆ ಎಂದ ಅವರು ಅನುಪಮಾ ಶೆಣೈ ಸೇವೆಗೆ ರಾಜೀನಾಮೆ ಸಲ್ಲಿಸುವ ವ್ಯವಸ್ಥಿತ ಪಿತೂರಿಯನ್ನು ರೂಪಿಸಲಾಗಿದು,್ದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ್ದ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಹರೀಶ ಮತ್ತಿತರರು ಉಪಸ್ಥಿತರಿದ್ದರು.
ಸಾಗರ: ಪ್ರಕರಣ ಸಿಬಿಐಗೆ ವಹಿಸಲು ಮನವಿ
ಸಾಗರ,ಜು.8: ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಶುಕ್ರವಾರ ಬಿಜೆಪಿ ವತಿಯಿಂದ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರ ಘಟಕದ ಅಧ್ಯಕ್ಷ ಸತೀಶಬಾಬು, ರಾಜ್ಯದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿಯಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆೆ. ಡಿವೈಎಸ್ಪಿ ಗಣಪತಿ ಅವರು ದಕ್ಷ ಅಧಿಕಾರಿಯಾಗಿದ್ದರು. ಸಾಯುವ ಮುನ್ನ ಗಣಪತಿ ಅವರು ತಮಗೆ ಏನಾದರೂ ತೊಂದರೆ ಆದರೆ ಅದಕ್ಕೆ ಸಚಿವ ಕೆ.ಜೆ.ಜಾರ್ಜ್ ಅವರೇ ನೇರ ಹೊಣೆಗಾರರು ಎಂದು ಮಾಧ್ಯಮದ ಎದುರು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡಬೇಕು. ಅವರ ವಿರುದ್ಧ್ದ ಸೂಕ್ತ ತನಿಖೆಗೆ ಆದೇಶ ನೀಡಬೇಕು ಎಂದರು. ಬಿಜೆಪಿ ನಗರ ಘಟಕದ ಉಪಾಧ್ಯಕ್ಷ ಕೆ.ಆರ್.ಗಣೇಶಪ್ರಸಾದ್ ಮಾತನಾಡಿ, ಡಿವೈಎಸ್ಪಿ ಗಣಪತಿ ಸೇರಿದಂತೆ ಕಲ್ಲಪ್ಪ, ಡಿ.ಕೆ.ರವಿ ಆತ್ಮಹತ್ಯೆಯನ್ನು ಸಿಬಿಐ ತನಿಖೆಗೆ ವಹಿಸಬೇಕು. ಮೈಸೂರು ಜಿಲ್ಲಾಧಿಕಾರಿಗಳಿಗೆ ಅವಾಚ್ಯಶಬ್ದದಿಂದ ನಿಂದಿಸಿರುವ ಸಿದ್ದರಾಮಯ್ಯ ಅವರ ಆಪ್ತರನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ನಗರಸಭಾ ಸದಸ್ಯರಾದ ಶ್ರೀನಿವಾಸ್ ಮೇಸ್ತ್ರಿ, ನಾಗರತ್ನಾ ಸಿ., ಪ್ರಮುಖರಾದ ರವೀಶಕುಮಾರ್, ನಾಗರಾಜಸ್ವಾಮಿ, ವಿ.ಮಹೇಶ್, ಭೀರೇಶ್ ಕಾಗೋಡು ಮತ್ತಿತರರು ಉಪಸ್ಥಿತರಿದ್ದರು.







