ಕಡೂರು: ಸೂಕ್ತ ತನಿಖೆಗೆ ಆಗ್ರಹಿಸಿ ಧರಣಿ
ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣ

ಕಡೂರು, ಜು.8: ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಲ್ಲಪ್ಪ ಹಂಡಿಬಾಗ್ ಅವರ ಆತ್ಮಹತ್ಯೆಯ ಹಿಂದೆ ಕಾಣದ ಕೈಗಳ ಕೈವಾಡವಿದೆ, ಈ ಬಗ್ಗೆ ಸೂಕ್ತ ತನಿಖೆ ನಡೆದು ಸತ್ಯಾಂಶ ಬೆಳಕಿಗೆ ಬಂದು ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜ್ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೆೇರಿ ಆವರಣದಲ್ಲಿ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಅವರ ಸಾವಿಗೆ ಕಾರಣರಾದವರ ವಿರುದ್ಧ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ಪಟ್ಟಣದ ನಾಗರಿಕರು ಮತ್ತು ವಿವಿಧ ಪಕ್ಷದ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ನಡೆಸಿದ ಧರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಆತ್ಮಹತ್ಯೆ ಪ್ರಕರಣದಲ್ಲಿ ಕಲ್ಲಪ್ಪಅವರನ್ನು ತಪ್ಪಿಸ್ಥರನ್ನಾಗಿ ಮಾಡಲಾಗಿದ್ದು, ಕಲ್ಲಪ್ಪ ಅವರು ಕರ್ತವ್ಯದ ಸಮಯದಲ್ಲಿ ಜೂಜುಕೊರರ ವಿರುದ್ಧ ಸಿಂಹ ಸ್ವಪ್ನವಾಗಿದ್ದರು, ಬಹಳಷ್ಟು ಜನರಿಗೆ ಕಾನೂನು ರೀತಿ ಕಡಿವಾಣ ಹಾಕಿದ್ದರ ಹಿನ್ನೆಲೆಯಲ್ಲಿ ಅವರೆ ಲ್ಲರೂ ಸೇರಿ ಕಲ್ಲಪ್ಪ ಅವರ ಆತ್ಮಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದರು.
ಜೆಡಿಎಸ್ ನಗರ ಘಟಕದ ಕಾರ್ಯಾ ಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಕಲ್ಲಪ್ಪ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಎಷ್ಟೇ ದೊಡ್ಡ ರಾಜಕಾರಣಿ ಅಥವಾ ಅಧಿಕಾರಿಯಾಗಲಿ ಭಾಗಿಯಾಗಿದ್ದರೂ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ನಿನ್ನೆ ಮತ್ತೊಬ್ಬ ಡಿವೈಎಸ್ಪಿ ಗಣಪತಿ ಬರೆದಿಟ್ಟಿರುವ ಡೆತ್ನೋಟ್‌ನಲ್ಲಿ ಬರೆದಿರುವ ಅಂಶವನ್ನು ಗಮನಿಸಿದರೆ ರಾಜ್ಯ ಸರಕಾರದ ಆಡಳಿತ ವೈಖರಿ ಯಾವ ರೀತಿ ನಡೆಯುತ್ತಿದೆ ಎಂದು ತಿಳಿಯುತ್ತದೆ, ಈ ಇಬ್ಬರು ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಬೇಕು ಹಾಗೂ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್, ಜಿಲ್ಲಾ ಪಂಚಾಯತ್ ಸದಸ್ಯ ಶರತ್‌ಕೃಷ್ಣಮೂರ್ತಿ, ಮಲೆನಾಡು ಅಭಿವೃದ್ಧಿ ನಿಗಮದ ನಿರ್ದೇಶಕಿ ಸಾವಿತ್ರಿ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್. ಪುರಸಭಾ ಸದಸ್ಯರಾದ ಕೆ.ಎಂ. ಸೋಮಶೇಖರ್, ಮೋಹನ್‌ಕುಮಾರ್, ಬಷೀರ್‌ಸಾಬ್, ಮುಖಂಡರಾದ ಹೂವಿನಗೋವಿಂದಪ್ಪ, ತಿಪ್ಪೇಶ್, ನಮ್ಮ ಕರ್ನಾಟಕ ರಕ್ಷಣಾವೇದಿಕೆಯ ಗೌರವಾಧ್ಯಕ್ಷ ಕದಂಬ ವೆಂಕಟೇಶ್ ಮಾತನಾಡಿದರು.
ಧರಣಿಗೂ ಮುನ್ನಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಿ ತಾಲೂಕು ಕಚೆೇರಿ ಆವರಣದಲ್ಲಿ ತಾಲೂಕು ದಂಡಾಧಿಕಾರಿ ಎಂ. ಭಾಗ್ಯಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ರೇಣುಕಾ ಉಮೇಶ್, ಪುರಸಭಾ ಸದಸ್ಯರಾದ ಕೆ.ಎಸ್. ಮಂಜುನಾಥ್, ಜಯಣ್ಣ, ಮುಖಂಡರಾದ ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಚ್. ರಂಗನಾಥ್, ಕೆ.ಇ. ಹಿರಿಯಣ್ಣ, ಕೆ.ಎಸ್. ಮಂಜು (ಬಂಕ್), ಕಾಂತರಾಜ್, ರವಿ, ಶ್ರೀನಿವಾಸ್ ಜಿಮ್, ಮನುಮರುಗುದ್ದಿ, ಗಗನ್ ಮತ್ತಿತರರು ಉಪಸ್ಥಿತರಿದ್ದರು







