ನಿಮಗೆ ಎಂದಾದರೂ ನಿಮ್ಮ ಆತ್ಮಸಾಕ್ಷಿ ಕಾಡಿದೆಯೇ ? ದೇವರಿಗೆ ಹೆದರಿದ್ದೀರಾ ?
ಮಾಜಿ ಪತ್ರಕರ್ತ , ಹಾಲಿ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಗೆ ಬಹಿರಂಗ ಪತ್ರದಲ್ಲಿ ರವೀಶ್ ಕುಮಾರ್ ಪ್ರಶ್ನೆ

ಮಾನ್ಯ ಅಕ್ಬರ್,
ಶುಭಾಶಯಗಳು.
ಈದ್ ಮುಬಾರಕ್. ನೀವು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವರಾಗಿರುವುದು ಈದ್‌ನಷ್ಟೇ ಮಹತ್ವದ ಕ್ಷಣ. ಮೊದಲು ಭಾರತೀಯ ಜನತಾ ಪಕ್ಷದ ವಕ್ತಾರರಾಗಿ, ಬಳಿಕ ಸಂಸದರಾಗಿ ಹಾಗೂ ಇದೀಗ ಸಚಿವರಾಗಿರುವುದು ಪತ್ರಕರ್ತರಾದ ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ನೀವು ಕಾಂಗ್ರೆಸ್ ಟಿಕೆಟ್‌ನಿಂದ ಚುನಾವಣೆ ಗೆದ್ದವರು. ಬಳಿಕ ಮತ್ತೆ ಸಂಪಾದಕರಾಗಿ ವಾಪಸಾದಿರಿ. ಮತ್ತೆ ಸಂಪಾದಕರಾಗಿದ್ದವರು ವಕ್ತಾರರಾಗಿ, ಸಚಿವರಾದಿರಿ. ಪತ್ರಕರ್ತರು ರಾಜಕಾರಣಿಯಾಗಿ ಬದಲಾಗುವುದು ಹಾಗೂ ವೃತ್ತಿಸಂಹಿತೆಯ ಬಗ್ಗೆ ನೀವು ಏನು ಯೋಚಿಸುತ್ತೀರಿ ಎನ್ನುವುದು ನನಗಿನ್ನೂ ಅರ್ಥವಾಗಿಲ್ಲ.
ನೀವು ಎಂದಾದರೂ ಆತ್ಮಸಾಕ್ಷಿಯ ಸಂಘರ್ಷದ ಪರಿಸ್ಥಿತಿ ಎದುರಿಸಿ ದ್ದೀರಾ? ಪತ್ರಿಕೋದ್ಯಮದಲ್ಲಿ ದೇವರು ಇಲ್ಲದಿದ್ದರೂ, ಈ ದಿನಗಳಲ್ಲಿ ನಿಮಗೆ ದೇವರ ಬಗ್ಗೆ ಭೀತಿ ಇದೆಯೇ?
ಅಕ್ಬರ್‌ಜೀ, ನಾನು ಈ ಪತ್ರವನ್ನು ನಿಮಗೆ ಸ್ವಲ್ಪಮಟ್ಟಿಗೆ ಕಹಿಯಾ ಗಿಯೇ ಬರೆಯುತ್ತಿದ್ದೇನೆ. ಆದರೆ ಅದಕ್ಕೆ ನೀವು ಕಾರಣರಲ್ಲ. ಅದರಿಂದ ನೀವು ನನಗೆ ಸಹಾಯ ಮಾಡಬಹುದು. ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಪಿಂಪ್ (ವೇಶ್ಯೆ ದಲ್ಲಾಳಿ) ಎಂದು ಕರೆಯಲಾಗುತ್ತಿದೆ. ರಾಜಕೀಯ ಬದಲಾವಣೆಗಳಿಂದಾಗಿ ನಿಮ್ಮಂಥ ಹಿರಿಯ ಪತ್ರಕರ್ತರು ಶ್ರೇಷ್ಠ ಎಂದು ಪರಿಗಣಿಸುವ ಭಾರತದಲ್ಲೂ, ಪಿಂಪ್ ಹಾಗೂ ವಿಚಲಿತಗೊಳಿಸುವ ಸುದ್ದಿಗಳ ಸಂಸ್ಕೃತಿ ಬೆಳೆಯುತ್ತಿದೆ. ಸುದ್ದಿ ನಿರೂಪಕ ಎಂದರೇನು, ಪ್ರೈಂಟೈಮ್ ಎಂದರೇನು ಎಂಬ ಬಗ್ಗೆ ಕಲ್ಪನೆಯೂ ಇಲ್ಲದ, ಶಾಲೆಗೇ ಹೋಗದ ತನ್ನ ತಾಯಿಯನ್ನೂ ವೇಶ್ಯೆ ಎಂದು ಕರೆಯಲಾಗಿದೆ. ಆಕೆ ಎಂದೂ ಎನ್‌ಡಿಟಿವಿ ಸ್ಟುಡಿಯೊ ನೋಡಿಲ್ಲ. ಆಕೆ ಕೇಳುವುದೆಂದರೆ, ಚೆನ್ನಾಗಿ ನಡೆಯುತ್ತಿದೆಯೇ ಎಂದು ಮಾತ್ರ. ಆದರೆ ಆಕೆ ಪತ್ರಿಕೆಗಳನ್ನು ಗಮನವಿಟ್ಟು ಓದುತ್ತಾಳೆ. ನನ್ನನ್ನು ಹೀಗೆ ನಿಂದಿಸಲಾಗಿದೆ ಎನ್ನುವುದು ತಿಳಿದಾಗ, ಹಲವು ದಿನ ಆಕೆ ನಿದ್ದೆಯನ್ನೇ ಮಾಡಲಿಲ್ಲ.
ಅಕ್ಬರ್‌ಜೀ ನೀವು ಪತ್ರಿಕೋದ್ಯಮದಿಂದ ರಾಜಕೀಯಕ್ಕೆ ಬಂದಾಗ, ನಿಮ್ಮನ್ನೂ ಜನ ಪಿಂಪ್ ಎಂದು ನಿಂದಿಸಿದ್ದರೇ? ನನ್ನನ್ನು ಅಣಕಿಸಿದಂತೆ ಅಣಕಿಸಿದ್ದರೇ? ಮತ್ತೆ ನೀವು ಕಾಂಗ್ರೆಸ್‌ಗೆ ಪತ್ರಿಕೋದ್ಯಮದಿಂದ ಬಂದಾಗ, ನೀವು ಸದಸ್ಯರಾಗಿರುವ ಪಕ್ಷದ, ಅಂದು ವಿರೋಧ ಪಕ್ಷದಲ್ಲಿದ್ದ ಸದಸ್ಯರು 10, ಜನಪಥ್ (ಕಾಂಗ್ರೆಸ್ ಕೇಂದ್ರ ಕಚೇರಿ)ನ ಅಥವಾ ಇತರ ಪಕ್ಷಗಳ ಪಿಂಪ್ ಎಂದು ಕರೆದಿದ್ದರೇ? ಇದಕ್ಕೆ ನೀವು ಯಾವ ವಿವರಣೆ ಕೊಡುತ್ತಾ ಬಂದಿರಿ? ಈ ವಿವರಣೆಗಳನ್ನು ದಯವಿಟ್ಟು ನನ್ನ ಜತೆ ಹಂಚಿಕೊಳ್ಳುತೀರಾ? ನನಗೆ ನಿಮ್ಮ ಸಹಾಯ ಅಗತ್ಯವಿದೆ.
ಪತ್ರಿಕೋದ್ಯಮದಲ್ಲಿ ನಾನು ಹಲವು ಕೆಟ್ಟ ವರದಿ ಮಾಡಿದ್ದೇನೆ. ಕೆಲವಂತೂ ಭಯಾನಕ. ಆದರೆ ಕಳೆದ ಮೂರು ವರ್ಷ ಹಿಂದಿನವರೆಗೂ ಯಾರೂ ನನ್ನನ್ನು ಪಿಂಪ್ ಎಂದು ಕರೆದಿಲ್ಲ. ವೃತ್ತಿಗೆ ನನ್ನ ತಂಗಿ ಅಥವಾ ತಾಯಿಯನ್ನು ಎಳೆಯಲಿಲ್ಲ. ಅಕ್ಬರ್ ಸರ್, ನಾನು ಪಿಂಪ್ ಅಲ್ಲ. ನಾನು ಅಕ್ಬರ್ ಆಗಬೇಕಾದರೆ ಏನು ಮಾಡಬೇಕು, ದಯವಿಟ್ಟು ಹೇಳಿ. ಮುರಳಿ ಮನೋಹರ ಜೋಶಿ, ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದಾಗ ನಾನು ಶಿಕ್ಷಣದ ಕೇಸರೀಕರಣದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿದ್ದೆ. ಆದರೆ ನಿಮ್ಮ ಪಕ್ಷದ ಯಾರೂ ನನ್ನ ಬಗ್ಗೆ ದ್ವೇಷದಿಂದ ಮಾತನಾಡಿಲ್ಲ. ಜೋಶಿಯವರೇ ಸಂದರ್ಶನದ ಬಳಿಕ ಚಹಾ ಸೇವಿಸಿ, ಸಿಹಿ ಕೇಳುತ್ತಿದ್ದರು. ನೀವು ಕಾಂಗ್ರೆಸ್‌ನ ಪಿಂಪ್ ಆದ್ದರಿಂದ ಇಂಥ ಪ್ರಶ್ನೆ ಕೇಳುತ್ತಿದ್ದೀರಿ ಎಂದು ಅವರೆಂದೂ ಹೇಳಲಿಲ್ಲ. ಅವರ ವಯಸ್ಸಿನ ಕಾರಣದಿಂದ ತಕ್ಷಣ ಅವರಿಗೆ ಕೋಪ ಬರುತ್ತಿತ್ತು. ಆದರೆ ಅವರೆಂದೂ ಸಂದರ್ಶನ ನೀಡಲು ನಿರಾಕರಿಸಲಿಲ್ಲ ಅಥವಾ ಸರಕಾರ ನನ್ನ ಬಗ್ಗೆ ಸಿಟ್ಟಾಗಿದೆ ಎಂಬ ಸುಳಿವನ್ನೂ ನೀಡಲಿಲ್ಲ.
ಆದರೆ ಈಗ ಎಲ್ಲವೂ ಬದಲಾಗಿದೆ. ರಾಜಕೀಯ ನಿಯಂತ್ರಣದ ಹೊಸಸಂಸ್ಕೃತಿ ಬಂದಿದೆ. ಪ್ರತಿ ಸುದ್ದಿಯ ಹಿಂದೆ ರಾಜಕೀಯ ಒಲವು ಇರುವುದನ್ನು ಜನ ಕೂಡಾ ಅರ್ಥ ಮಾಡಿಕೊಂಡಿದ್ದಾರೆ. ಇದು ಮಾತ್ರ ನಿಂದನಾತ್ಮಕವಾಗಿ ವ್ಯಕ್ತವಾಗುತ್ತಿದೆ. ಪ್ರಧಾನಿಯ ಭಾವಚಿತ್ರ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಲಾಂಛನವನ್ನು ಬಳಸಿಕೊಳ್ಳುತ್ತಿದ್ದಾರೆ. ಹಲವರು ಸಚಿವರ ಫಾಲೊವರ್‌ಗಳಾಗಿದ್ದರೆ, ಸಚಿವರು ಕೂಡಾ ಇವರ ಫಾಲೊವರ್ಸ್ ಆಗಿದ್ದಾರೆ. ಕೆಲವರನ್ನು ಬಿಜೆಪಿ ಎಂದು ಗುರುತಿಸಿ, ಹೊಗಳಿಕೆಯ ಸುರಿಮಳೆಗೈಯುತ್ತಾರೆ.
ಖಂಡಿತವಾಗಿಯೂ ಪತ್ರಿಕೋದ್ಯಮದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಅದು ನೀವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಸೋತು ಮತ್ತೆ ಸಂಪಾದಕರಾಗಿ ಬರುವಾಗ ಇರಲಿಲ್ಲ. ಅದು ಪತ್ರಿಕೋದ್ಯಮದ ಸುವರ್ಣಯುಗ. ನಮ್ಮ ನಿಂದಕರು ಇದನ್ನು ಅಪರಾಧ ಎಂದು ಪರಿಗಣಿಸದಿದ್ದರೆ ಅದನ್ನು ಅಕ್ಬರ್ ಯುಗ ಎಂದು ಕರೆಯಬಹುದು. ಇಂದು ಕೆಲ ಪತ್ರಕರ್ತರು, ವಕ್ತಾರರ ವಿಸ್ತರಿತ ರೂಪವಾಗಿದ್ದಾರೆ. ನನ್ನನ್ನು ನಿಂದಿಸುವ ಮಂದಿ ಇವರನ್ನು ಪಿಂಪ್ ಎಂದು ಕರೆಯುವುದಿಲ್ಲ. ಸ್ಮತಿ ಇರಾನಿಯನ್ನು ಹೊಗಳಿ ಅಟ್ಟಕ್ಕೇರಿಸುವ ವರ್ಗವೇ ಇದನ್ನು ಮಾಡುತ್ತಿರುವುದು.
ವಿದೇಶಾಂಗ ವ್ಯವಹಾರ ಖಾತೆಯಲ್ಲಿ ನಿಮ್ಮ ಸಹೋದ್ಯೋಗಿಯಾಗಿರುವ ಜನರಲ್ ವಿ.ಕೆ.ಸಿಂಗ್, ‘ಪ್ರೆಸ್ಟಿಟ್ಯೂಟ್’ ಎಂಬ ಪದ ಸಂಯೋಜಿಸಿದ್ದಾರೆ. ಹಿಂದಿಯಲ್ಲಿ ಅವರ ಬೆಂಬಲಿಗ ವರ್ಗ ನಮ್ಮನ್ನು ‘ಪ್ರೆಶ್ಯಾ’ (ಪತ್ರಕರ್ತ ವೇಶ್ಯೆ) ಎಂದು ಕರೆಯುತ್ತದೆ. ನಾನು ಎನ್‌ಡಿಟಿವಿಗೆ ಕೆಲಸ ಮಾಡುತ್ತಿರುವ ಕಾರಣ ಅವರು ‘ಎನ್’ ಬದಲು ‘ಆರ್’ ಸೇರಿಸಿ ‘ರಂಡಿ ಟಿವಿ’ ಎಂದು ಕರೆಯುತ್ತಾರೆ.
ಪತ್ರಕರ್ತರು ಕಠಿಣ ಪ್ರಶ್ನೆಗಳನ್ನು ಕೇಳಿದಾಗ, ಅವರು ಇನ್ನೊಂದು ಪಕ್ಷದ ಪಿಂಪ್‌ಗಳು ಎನಿಸುತ್ತದೆಯೇ? ಯಾವ ಪ್ರಶ್ನೆ ಪಿಂಪ್ ಆಗಿ ಮಾಡುತ್ತದೆ? ನಿಮ್ಮಂಥ ಸಂಪಾದಕರು ಹೇಳಬಹುದು. ನಾನೂ ಒಂದೆರಡು ಅಂಶ ಕಲಿಯಬಹುದು. ಎಂದಿಗೂ ರವೀಶ್ ಕುಮಾರ್ ಆಗಬೇಡಿ ಎಂದು ಉದಯೋನ್ಮುಖ ಪತ್ರಕರ್ತರಿಗೆ ಹೇಳಬಹುದು. ನೀವು ಬೇರೊಬ್ಬರಂತಾಗಬೇಕಾದರೆ ಅಕ್ಬರ್ ಆಗಿ. ಯಾಕೆಂದರೆ ರವೀಶ್ ಕುಮಾರ್ ಕೂಡಾ ಮುಂದೊಂದು ದಿನ ಅಕ್ಬರ್ ಆಗಬಹುದು ಎಂದು ಹೇಳುತ್ತೇನೆ.
ನಾನು ತೀರಾ ಭಾವನಾತ್ಮಕ ವ್ಯಕ್ತಿ. ಈ ದಾಳಿಯಿಂದ ನಡುಗಿದ್ದೇನೆ. ಈ ಕಾರಣದಿಂದ ನಿಮ್ಮನ್ನು ನೋಡಿದ ಬಳಿಕ, ನೀವು ನನಗೆ ಸಹಾಯ ಮಾಡಬಹುದು ಎನಿಸಿದೆ. ಕಳೆದ ಮೂರು ವರ್ಷದಿಂದ ಪ್ರತಿ ವರದಿಗೆ ಮುನ್ನ, ಈ ವರದಿಯಿಂದಾಗಿ ಜನ ನನ್ನನ್ನು ಪಿಂಪ್ ಎಂದೂ ತಾಯಿಯನ್ನು ವೇಶ್ಯೆ ಎಂದೂ ಕರೆಯಬಹುದೇ ಎಂಬ ಭೀತಿ ಎದುರಾಗುತ್ತದೆ. ಆದರೆ ನನ್ನ ತಾಯಿ ಮಾತ್ರ ನಿಜವಾದ ಭಾರತಮಾತೆ. ನಾನು ಮತ್ತೆ ಮತ್ತೆ ತಾಯಿಯನ್ನೇ ಕರೆ ತರುತ್ತೇನೆ. ಏಕೆಂದರೆ, ನಿಮ್ಮ ಪಕ್ಷದವರು ಏಕ್ ಮಾ ಕಿ ಭಾವ್ನಾ ಒಳ್ಳೆಯದು ಎಂದು ನಂಬಿದ್ದಾರೆ. ನಿಮ್ಮ ತಾಯಿಯ ಹೆಸರು ತೆಗೆದುಕೊಂಡಿರಿ ಎಂದಾದರೆ ಅಲ್ಲಿಗೆ ಚರ್ಚೆ ಮುಗಿಯಿತೆಂದೇ ಅರ್ಥ.
ಅಕ್ಬರ್‌ಜೀ ನಾನು ಈ ಪತ್ರವನ್ನು ಬಹಳಷ್ಟು ನಿರೀಕ್ಷೆಯೊಂದಿಗೆ ಬರೆಯುತ್ತಿದ್ದೇನೆ. ಪತ್ರಿಕೋದ್ಯಮ ಕಲಿಕೆಗೆ 10 ರಿಂದ 15 ಲಕ್ಷ ವೆಚ್ಚ ಮಾಡುವ ಯುವಕರಿಗೆ ನಿಮ್ಮ ಪ್ರತಿಕ್ರಿಯೆ ನಿದರ್ಶನವಾಗಬಹುದು. ನನ್ನ ದೃಷ್ಟಿಯಲ್ಲಿ, ಪತ್ರಿಕೋದ್ಯಮವನ್ನು ಕಲಿಯಲು ಅಷ್ಟೊಂದು ವೆಚ್ಚ ಮಾಡುವ ಪೀಳಿಗೆ, ಅಷ್ಟೊಂದು ಮೌಲ್ಯಯುತವಲ್ಲ. ಆದರೆ ನಿಮ್ಮ ಪ್ರತಿಸ್ಪಂದನೆ ಖಂಡಿತವಾಗಿಯೂ ಅವರ ಸ್ಥೈರ್ಯ ಹೆಚ್ಚಿಸಬಹುದು.
ನೀವು ರಾಜಕೀಯದಿಂದ ಪತ್ರಿಕೋದ್ಯಮಕ್ಕೆ ಮರಳಿದಾಗ, ಅವರ ಬಗ್ಗೆ ಬರೆಯುವಾಗ ನೀವು ಪಕ್ಷ ಅಥವಾ ಸಿದ್ಧಾಂತದ ಬಗ್ಗೆ ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಿದೆಯೇ? ಎಷ್ಟರಮಟ್ಟಿಗೆ ಗಟ್ಟಿಯಾಗಿ? ನೀವು ಪತ್ರಿಕೋದ್ಯಮದಿಂದ ರಾಜಕೀಯಕ್ಕೆ ಮರಳಿದಾಗ, ನೀವು ಬರೆದದ್ದನ್ನು ನೀವು ಸಂದೇಹಪಡುವಂತಾಗಿತ್ತೇ? ಪ್ರತಿಫಲಾಪೇಕ್ಷೆಯಿಂದಲೇ ಬರೆಯುತ್ತಿದ್ದೆ ಎಂಬ ಯೋಚನೆ ಬರುತ್ತಿತ್ತೇ? ಪತ್ರಕರ್ತರಾದ ನಾವು ಸಮಯ ಹಾಗೂ ಪರಿಸ್ಥಿತಿಯ ಒತ್ತಡದಿಂದ ಕೆಲಸ ಮಾಡುತ್ತೇವೆ ಎನ್ನುವುದು ನನ್ನ ನಂಬಿಕೆ. ಪತ್ರಿಕೋದ್ಯಮದಿಂದ ರಾಜಕೀಯಕ್ಕೆ, ರಾಜಕೀಯದಿಂದ ಪತ್ರಿಕೋದ್ಯಮಕ್ಕೆ ಬರುವುದರಿಂದ ಒಬ್ಬ ವ್ಯಕ್ತಿ ನೈತಿಕ ದ್ವಂದ್ವದಿಂದ ಹೊರಬರಲು ಸಾಧ್ಯವೇ? ಅದನ್ನು ನೀವು ನಿರ್ವಹಿಸಿದ್ದೀರಾ?
ಟ್ವಿಟ್ಟರ್ ರಾಕ್ಷಸರಿಂದ ತಪ್ಪಿಸುವ ಸಲುವಾಗಿ, ಗುಜರಾತ್ ಗಲಭೆ ಸೇರಿದಂತೆ ವಿವಿಧ ಗಲಭೆಗಳ ಸಂದರ್ಭದಲ್ಲಿ ನೀವು ಏನು ಬರೆದಿದ್ದಿರಿ ಎನ್ನುವುದನ್ನು ಇಲ್ಲಿ ವಿವರಿಸಲು ಬಯಸುವುದಿಲ್ಲ. ವೈಯಕ್ತಿಕ ಮಟ್ಟದಲ್ಲಿ ಇದನ್ನು ಕೇಳುತ್ತಿದ್ದೇನೆ. ನಿಮಗಿಂತ ಮೊದಲು ಕೂಡಾ ಮಾಧ್ಯಮದಲ್ಲಿದ್ದ ಹಲವು ಮಂದಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ನೀವು ಲೋಕಸಭೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಿರಿ ಹಾಗೂ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿ ಯಾಗಿದ್ದಿರಿ. ಪತ್ರಕರ್ತರನ್ನು ಸಂಸತ್ತಿಗೆ ಕಳುಹಿಸುವ ಕಾಂಗ್ರೆಸ್ ಸಂಪ್ರದಾಯ ವನ್ನು ಉಳಿಸಿ, ಬೆಳೆಸುವ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ನಾನು ಅಭಿನಂದಿಸುತ್ತೇನೆ. ಭಾರತೀಯ ಸಂಸ್ಕೃತಿಯನ್ನು ಹೊಗಳುವ ಮಂದಿ ಬಹುಶಃ ಅಟಲ್ ಬಿಹಾರಿ ವಾಜಪೇಯಿ ಸ್ವತಃ ಪತ್ರಕರ್ತರಾಗಿದ್ದರು ಎನ್ನುವುದನ್ನು ಗಮನಿಸಿದಂತಿಲ್ಲ. ಪ್ರಧಾನಿಯಾದ ಬಳಿಕ ಕೂಡಾ ಅವರು ತಮ್ಮ ವೀರ್ ಅರ್ಜುನ್ ಪತ್ರಿಕೆಯ ವ್ಯಾಮೋಹ ತ್ಯಜಿಸಲು ಸಾಧ್ಯವಾಗಲಿಲ್ಲ. ಇಂಥ ಹಲವು ಉದಾಹರಣೆಗಳನ್ನು ನೋಡಬಹುದು.
ನಾನು ಇದುವರೆಗೂ ರಾಜಕೀಯಕ್ಕೆ ಧುಮುಕಿಲ್ಲ. ನಾನು ಹಾಗೆ ಮಾಡಿದರೆ ನಿಮಗೆ ದೊಡ್ಡ ಸಹಾಯವಾಗುತ್ತದೆ. ಈ ಕಾರಣದಿಂದ ನೀವು ಪತ್ರಕರ್ತರು ಚುನಾವಣೆಗೆ ಸ್ಪರ್ಧಿಸಬೇಕೇ, ಸಚಿವರಾಗಬೇಕೇ, ಮತ್ತೆ ಪತ್ರಕರ್ತರಾಗಬೇಕೆೇ? ಎನ್ನುವುದನ್ನು ಹೇಳಬೇಕು. ಆ ಬಳಿಕ ಅವರು ವರದಿ ಮಾಡಲು ಸಮರ್ಥರಾಗಿರುತ್ತಾರೆಯೇ? ರಾಷ್ಟ್ರೀಯ ಹಿತಾಸಕ್ತಿ ಹೆಸರಿನಲ್ಲಿ ಒಬ್ಬ ವರದಿಗಾರನಾದರೆ, ಆತ ಸದಾ ರಾಜಕೀಯ ಅವಕಾಶಗಳ ಬಗ್ಗೆ ಯೋಚಿಸಬೇಕೇ?
ತತ್ವಗಳ ಹೆಸರಿನಲ್ಲಿ, ನಿಮ್ಮನ್ನು ನಿಂದಿಸುತ್ತಿರುವವರು ನಿಮ್ಮನ್ನು ಸ್ವಾಗತಿಸುತ್ತಿದ್ದಾರೆ ಎನ್ನುವುದು ನನ್ನ ಭಾವನೆ. ಅವರು ನಿಮ್ಮ ಮೇಲೆ ಹೂಮಳೆಗೆರೆಯಬೇಕು. ನಿಮ್ಮ ಸಾಮರ್ಥ್ಯ ನಿಸ್ಸಂದೇಹ. ನೀವು ನಮ್ಮೆಲ್ಲರಿಗೂ ಹೀರೊ. ಪತ್ರಿಕೋದ್ಯಮವನ್ನು ನಮ್ಮ ಧರ್ಮ ಎಂದು ಪರಿಗಣಿಸುವ ನಾವು, ಅದರ ಸಂಪ್ರದಾಯವನ್ನು ಹೇಗೆ ಎತ್ತಿ ಹಿಡಿದಿದ್ದೀರಿ ಎಂದು ಕಾಣಲು ಸಾಧ್ಯವೇ ಇಲ್ಲ. ಏಕೆಂದರೆ ಇಂದಿನ ದಿನಗಳಲ್ಲಿ ನಿರೂಪಕರು ತಮ್ಮ ಮಹತ್ವವನ್ನು ಟಿಆರ್‌ಪಿಗಳಿಂದ ಸಾಬೀತುಪಡಿಸುತ್ತಾರೆ. ಆದರೆ ನಾನು ಶೂನ್ಯ ಟಿಆರ್‌ಪಿ ಹೊಂದಿರುವ ನಿರೂಪಕ ಎಂದು ಹೇಳಿಕೊಳ್ಳಬೇಕು. ಟಿಆರ್‌ಪಿ ಮೀಟರ್, ನನ್ನನ್ನು ಯಾರೂ ನೋಡುತ್ತಿಲ್ಲ ಎಂದು ಹೇಳುತ್ತದೆ. ಈ ಕಾರಣದಿಂದ ನೀವು ನನ್ನ ಪತ್ರವನ್ನು ಕಡೆಗಣಿಸಬಹುದು. ಆದರೆ ಸಚಿವರಾಗಿರುವ ಕಾರಣಕ್ಕೆ ಈ ದೇಶದ ಎಲ್ಲ ನಾಗರಿಕರಿಗೂ ನೀವು ಹೊಣೆಗಾರರು. ಆದ್ದರಿಂದ ಈ ಆಧಾರದಲ್ಲಿ ನೀವು ಸ್ಪಂದಿಸಬಹುದು. ಗರಿಷ್ಠ ಟಿಆರ್‌ಪಿ ಹೊಂದಿರುವ ಯಾವ ನಿರೂಪಕನೂ ನಿಮ್ಮ ಬಳಿ, ಸಚಿವರಾಗಿದ್ದುಕೊಂಡು ಶೂನ್ಯ ಟಿಆರ್‌ಪಿ ಇರುವವನ ಪತ್ರಕ್ಕೆ ಹೇಗೆ ಸ್ಪಂದಿಸಿದ್ದೀರಿ ಎಂದು ಕೇಳಲಾರ. ಅದು ಕೂಡಾ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಿಗೆ. ಮತ್ತೊಮ್ಮೆ ಹೃದಯಾಂತರಾಳದ ಈದ್ ಮುಬಾರಕ್.





