ನೆಲೆಯೇ ಇಲ್ಲದವರು ಶೌಚಾಲಯ ಕಟ್ಟಿಕೊಳ್ಳುವುದೆಲ್ಲಿ?
ಮಾನ್ಯರೆ,
ಇರಲು ಒಂದು ಶಾಶ್ವತ ನೆಲೆಯೇ ಇಲ್ಲದಿದ್ದಾಗ, ಪಂಚಾಯತ್‌ನಿಂದ ದುಡ್ಡು ಬರುತ್ತದೆ ಪಾಯಿಖಾನೆ ಕಟ್ಟಿಸಿಕೊಳ್ಳಿ ಬಯಲು ಶೌಚಮುಕ್ತ ಭಾರತ ನಮ್ಮ ಕನಸು ಎನ್ನುವುದು ಎಂತಹ ಹಾಸ್ಯಾಸ್ಪದವೆನಿಸುತ್ತದೆ ಅಲ್ಲವೇ?
ಊರ ಅಂಚಲ್ಲಿ ಒಂದು ಬೀಳು ಬಯಲು, ಅಲ್ಲಿ ಬೀದಿ ದೀಪಗಳೂ ಇಲ್ಲದ ಏಳೆಂಟು ಸಾಲು ಗುಡಿಸಲುಗಳು ಬೀಡು ಬಿಟ್ಟಿರುತ್ತವೆ. ಬಿಸಿಲಿಗೆ ಬೆಂದು, ಮಳೆಗೆ ತೋಯ್ದು ಅವರ ಚರ್ಮ ಮಡುಗಟ್ಟಿದೆ. ಎದ್ದು ನಿಲ್ಲಲು ಆಗದ, ಕಾಲು ಚಾಚಲು ಬಾರದ ಈ ಗುಡಿಸಲುಗಳಲ್ಲಿ ಮಳೆ ಬಂದರೆ ಹೊರಗೂ ಒಳಗೂ ಒಂದೇ ಬಗೆಯ ಜಿನುಗುವಿಕೆ. ಗುಡಿಸಲ ತುಂಬ ಹಸಿವ ನೀಗಲು ಅಂಡಲೆದು ದಣಿದ ದೇಹಗಳ ಅಸಹಾಯಕತೆಯ ನಿಟ್ಟುಸಿರು. ಇವತ್ತಿನ ಹಸಿವು ಹೇಗೋ ನೀಗಿತ್ತೆನ್ನುವಾಗ ನಾಳೆಯ ಚಿಂತೆ ಕಾದು ಕುಳಿತಿರುತ್ತದೆ. ಇಲ್ಲಿನ ಮಕ್ಕಳ ವಯೋಸಹಜ ಓದುವ ಕನಸು ಭಗ್ನಗೊಂಡಿವೆ. ಹೀಗೆ ಅವರ ಬದುಕ ಬವಣೆ ಅಗೆಯತ್ತಾ ಹೋದರೆ ಆಳ ಹೆಚ್ಚುತ್ತದೆ. ಇದು ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳ ಸಾಮಾನ್ಯ ಚಿತ್ರಣ.
ಹಾಗಂತ ಇಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ಇಲ್ಲವೆಂದೇನಲ್ಲ. ಸರಕಾರದಿಂದ ನಿವೇಶನಗಳು ಬರುತ್ತವೆನ್ನುವುದು ಕೂಡ ನಿಜ. ಆದರೆ ನಿಜವಾದ ಫಲಾನುಭವಿಗಳಿಗೆ ತಲುಪುತ್ತವೆ ಎನ್ನುವುದು ಮಾತ್ರ ಅವಾಸ್ತವ. ಪಂಚಾಯತ್ ರಾಜಕೀಯ ರಾಜ್ಯದ ರಾಜಕೀಯಕ್ಕಿಂತ ತೀರಾ ಹದಗೆಟ್ಟಿದೆ. ನಿವೇಶನಗಳ ಹಂಚಿಕೆಯಲ್ಲಿ ಲಂಚಗುಳಿತನ ರಾಜಾರೋಷವಾಗಿಯೇ ನಡೆಯುತ್ತದೆ.
ಎಂದೋ ಬರಲಿರುವ ಚುನಾವಣೆಗೆ ಭಿನ್ನಮತ, ಸಚಿವ ಸ್ಥಾನಕ್ಕಾಗಿ ಕಚ್ಚಾಡುತ್ತಿರುವವರೇ ನಿಮಗೆ ಈ ಐಶಾರಾಮಿ ಬದುಕ ಕರುಣಿಸಿದವರಿಗೆ ಕೊನೆಯ ಪಕ್ಷ ಮೂಲ ಸೌಕರ್ಯವನ್ನಾದರೂ ಕಲ್ಪಿಸಿ. ಇರಲು ಸರಿಯಾಗಿ ಒಂದು ಸೂರೂ ಇಲ್ಲದೆ ತಲೆಮಾರುಗಳು ಸುಮ್ಮನೆ ಸರಿಯುತ್ತಿವೆ. ಸ್ಥಳೀಯ ರಾಜಕೀಯ ಧುರೀಣರೇ ತುಸು ಮನುಷ್ಯರಂತೆ ಆಲೋಚಿಸಿ. ಬದುಕುವ ಹಕ್ಕು ಅವರ ಪಾಲಿಗೂ ಇದೆಯಲ್ಲವೇ?.
ಆದ್ದರಿಂದ ಮೊದಲು ಅವರಿಗೊಂದು ಶಾಶ್ವತ ನೆಲೆ ಒದಗಿಸಿ, ನಂತರ ಶೌಚಾಲಯದ ಮಾತು ಬರಬೇಕಲ್ಲವೇ?





