ಮುನ್ನೆಲೆಗೆ ಬಾರದವರು
ಮಾನ್ಯರೆ,
ಅಂಗವೈಕಲ್ಯ, ವೃದ್ಧಾಪ್ಯ, ವಿಧವಾ ವೇತನವೆಂದು ಸರಕಾರದಿಂದ ಪ್ರತಿ ತಿಂಗಳು ಒಂದಿಷ್ಟಾದರೂ ಹಣ ಒದಗಿ ಬಂದು ಅವರ ಜೀವನಕ್ಕೆ ಸಹಕಾರಿಯಾಗುತ್ತದೆ. ಆದರೆ ನಮ್ಮ ಸಮಾಜದಲ್ಲಿ ಮೇಲಿನವರಷ್ಟೇ ಅಲ್ಲದೆ ಮದುವೆಯಿಲ್ಲದೆ ಬೇರೆಯವರ ಆಶ್ರಯದಲ್ಲಿ ಬದುಕುವ ಮಧ್ಯವಯಸ್ಸಿನ ಮಹಿಳೆಯರು ತುಂಬಾ ಜನ ಕಾಣಸಿಗುತ್ತಾರೆ. ಅವರಿಗೂ ಸರಕಾರದಿಂದ ನ್ಯಾಯಸಿಗಬೇಕಲ್ಲವೇ?
ಮಾನಸಿಕ ಅಸ್ವಸ್ಥರು ಬಾಲ್ಯದಲ್ಲಿ ನಡೆದ ಕಹಿ ಘಟನೆ, ಮೂರ್ಛೆ ರೋಗ, ವರದಕ್ಷಿಣೆ ಕೊಡುವ ಸಾಮರ್ಥ್ಯವಿಲ್ಲದವರು ಹೀಗೆ ಹಲವು ಹತ್ತು ಕಾರಣಗಳಿಂದ ಮದುವೆಯಾಗದೆ ಉಳಿದ ಮಹಿಳೆಯರು ಸಹಜವಾಗಿ ತಂದೆ-ತಾಯಿಗಳ ಆಶ್ರಯದಲ್ಲಿರುತ್ತಾರೆ. ಪೋಷಕರು ಕಾಲವಶವಾದ ನಂತರ ಇಂತಹ ಅನಕ್ಷರಸ್ಥ, ದುಡಿಯಲಾಗದವರ ಬದುಕು ತುಂಬ ದುಸ್ತರವಾಗಿ ಬಿಡುತ್ತದೆ. ಸರಕಾರದ ಯಾವ ಸವಲತ್ತುಗಳಿಗೂ ಇವರು ಅನರ್ಹರು. ಜೀವನ ಪರ್ಯಂತ ಇವರು ಪಡುವ ಪಡಿಪಾಟಲು, ಆಹಾರಕ್ಕಾಗಿ ಎದುರಿಸಬೇಕಾದ ಅವಮಾನಗಳು ವಿವರಣೆಗೆ ನಿಲುಕದ್ದು.
ಇಂತಹವರು ಸಮಾಜದ ಮುನ್ನೆಲೆಗೆ ಬರುವುದೇ ಇಲ್ಲ. ಹಾಗಾಗಿ ಸರಕಾರ ಇನ್ನಾದರೂ ಇಂತವರ ಸಮೀಕ್ಷೆ ನಡೆಸಿ, ಇವರಿಗೂ ಸೌಲಭ್ಯ ಒದಗಿಸಲು ಆಲೋಚಿಸಬೇಕಿದೆ.





