ಸುಳ್ಯ: ಆರ್‌ಟಿಇ ಪ್ರವೇಶ ನಿರಾಕರಣೆಗೆ ಪೋಷಕರ ಆಕ್ರೋಶ
ಸುಳ್ಯ, ಜು.8: ಆರ್‌ಟಿಇ ಅಡಿ ಪ್ರವೇಶ ನೀಡಲು ಸುಳ್ಯದ ಸೈಂಟ್ ಜೋಸೆಫ್ ಶಾಲಾ ಆಡಳಿತ ನಿರಾಕರಿಸಿದ ಕುರಿತು ಆಯ್ಕೆಯಾದ ಫಲಾನುಭವಿ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆದಿದೆ.
ಸುಳ್ಯದ ಸೈಂಟ್ ಜೋಸೆಫ್ ಶಾಲೆ ಅಲ್ಪಸಂಖ್ಯಾತ ವರ್ಗದ ಶಾಲೆಯಾಗಿದ್ದು, ಆರ್‌ಟಿಇ ಅಡಿ ಅದಕ್ಕೆ ವಿನಾಯಿತಿ ನೀಡಲಾಗಿತ್ತು. ಆದರೆ ಈ ವರ್ಷ ಅದನ್ನು ರದ್ದು ಮಾಡಿದ್ದು, ಅಲ್ಲಿ 28 ಮಕ್ಕಳಿಗೆ ಅವಕಾಶ ನೀಡಬೇಕೆಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಸಾಕಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಮೊದಲ ಹಂತದಲ್ಲಿ ವಾರ್ಡ್ ಒಳಗಿನ 7 ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರವೇಶ ನೀಡಲಾಗಿತ್ತು. ಎರಡನೆ ಹಂತದ ಪಟ್ಟಿಯಲ್ಲಿ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಇಲಾಖೆ ಬಿಡುಗಡೆ ಮಾಡಿದ್ದು, ಪ್ರವೇಶ ಪಡೆಯಲು ಜುಲೈ 8 ಕೊನೆಯ ದಿನವಾಗಿತ್ತು. ಆದರೆ ಇವರಿಗೆ ಪ್ರವೇಶ ನೀಡಲು ಆಡಳಿತ ಮಂಡಳಿ ನಿರಾಕರಿಸಿದೆ.
ಶಾಲೆಯಲ್ಲಿ ಈಗಾಗಲೇ ಎಲ್‌ಕೆಜಿಗೆ 132 ಸೀಟು ಭರ್ತಿಯಾಗಿದೆ. ಹಾಗಿದ್ದೂ 7 ಆರ್‌ಟಿಇ ಸೀಟುಗಳನ್ನು ಸೇರ್ಪಡೆ ಮಾಡಲಾಗಿದೆ. ಕೊಠಡಿಗಳು ಸಣ್ಣವಾಗಿದ್ದು, ಶಿಕ್ಷಕರೂ ಸೀಮಿತವಾಗಿದ್ದಾರೆ. ಇದ್ದ ಕೊಠಡಿಯಲ್ಲೇ ಇನ್ನೂ 12 ಮಕ್ಕಳನ್ನು ಸೇರ್ಪಡೆ ಮಾಡಿದರೆ ಎಲ್ಲಾ ಮಕ್ಕಳಿಗೂ ಹಿಂಸೆಯಾಗುತ್ತದೆ. ಹಾಗಾಗಿ ಸೇರ್ಪಡೆ ಮಾಡಿಲ್ಲ ಎನ್ನುತ್ತಾರೆ ಶಾಲಾ ಮುಖ್ಯ ಶಿಕ್ಷಕಿ.
ಈಗಾಗಲೇ ಸೀಟು ಭರ್ತಿಯಾಗಿದ್ದು, ಕೊಠಡಿ ಕೊರತೆ ಹಾಗೂ ಸೀಮಿತ ಶಿಕ್ಷಕಿಯರು ಇರುವುದರಿಂದ ಆರ್‌ಟಿಇ ಅಡಿ ಪ್ರವೇಶ ನೀಡಲು ಆಡಳಿತ ಮಂಡಳಿ ಸಿದ್ಧವಾಗಿಲ್ಲ. ಮಕ್ಕಳ ಪೋಷಕರಿಗೆ ಹಿಂಬರಹ ನೀಡುವಂತೆ ತಿಳಿಸಿದ್ದು, ಜಿಲ್ಲಾಧಿಕಾರಿಗೆ ವರದಿ ಮಾಡಲಾಗುತ್ತದೆ ಎನ್ನುತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ.







