ವಿಧೇಯಕದ ಹೆಸರು ಬದಲಿಸಲು ಸಚಿವ ಸಂಪುಟ
ವೌಢ್ಯ ಪ್ರತಿಬಂಧಕ ಕಾಯ್ದೆ
ಬೆಂಗಳೂರು, ಜು.8: ರಾಜ್ಯದಲ್ಲಿ ವೌಢಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದರೂ. ಅಲ್ಲದೆ, ಪ್ರಸಕ್ತ ಅಧಿವೇಶನದಲ್ಲೇ ವಿಧೇಯಕ ಮಂಡನೆ ಮಾಡಲು ಉದ್ದೇಶಿಸಿದ್ದರು ಅದನ್ನು ಜಾರಿಗೆ ತರಲು ಮಾತ್ರ ಸಾಧ್ಯವಾಗುತ್ತಿಲ್ಲ.
ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವೌಢ್ಯಪ್ರತಿಬಂಧಕ ಕಾಯ್ದೆ ಕುರಿತು ಸಚಿವರ ನಡುವೆ ಒಮ್ಮತ ಮೂಡಿಲ್ಲ. ಈ ಹಿನ್ನೆಲೆ ಯಲ್ಲಿ ವಿಷಯವನ್ನು ಮುಂದಿನ ಸಭೆಯಲ್ಲಿ ಚರ್ಚಿಸಲು ಮುಂದೂಡಲಾಯಿತು.
ವೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ಬಗ್ಗೆ ಹಲವೆಡೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ವಿಧೇಯಕದ ಹೆಸರನ್ನು ‘ಕರ್ನಾಟಕ ನರಬಲಿ ಮತ್ತು ಇತರ ಅಮಾನವೀಯ ದುಷ್ಟ ಮತ್ತು ಅಘೋರಿ ಪದ್ಧತಿ ಹಾಗೂ ವಾಮಾ ಚಾರ ಇವುಗಳ ಪ್ರತಿಬಂಧ ಹಾಗೂ ನಿರ್ಮೂಲನೆ ವಿಧೇಯಕ-2016’ ಎಂದು ಬದಲಾಯಿಸಿದೆ.
ಈ ವಿಧೇಯಕದಲ್ಲಿ ಯಾವ ಆಚರಣೆಗಳನ್ನು ನಿರ್ಬಂಧಿಸಬೇಕು ಹಾಗೂ ಯಾವುದಕ್ಕೆ ಅನುಮತಿ ನೀಡಬೇಕು ಎಂಬ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಿತು. ಕೆಲವು ಸಚಿವರು ‘ನರಬಲಿ’ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇನ್ನು ಕೆಲವರು ಕೊಂಡ ಹಾಯುವ ಆಚರಣೆಗಳ ಬಗ್ಗೆ ಪ್ರಶ್ನಿಸಿದರು. ಆದುದರಿಂದ, ಈ ಎಲ್ಲ ವಿಚಾರಗಳ ಕುರಿತು ಮತ್ತಷ್ಟು ಚರ್ಚೆ ನಡೆಸಿದ ಬಳಿಕವಷ್ಟೆ ವಿಧೇಯಕ ಮಂಡನೆಗೆ ಒಪ್ಪಿಗೆ ನೀಡಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.
ಮಹಾರಾಷ್ಟ್ರದಲ್ಲಿ ಇದೇ ಹೆಸರಿನಲ್ಲಿ ಕಾಯ್ದೆಯನ್ನು ಜಾರಿಗೊ ಳಿಸಲಾಗಿದೆ. ಅದರಂತೆ, ರಾಜ್ಯ ಸರಕಾರವು ಸುಮಾರು 23 ಆಚರಣೆ ಗಳನ್ನು ನಿರ್ಬಂಧಿಸಲು ಉದ್ದೇಶಿಸಿದೆ. ನಿರ್ಬಂಧನೆಗೆ ಒಳಪಡಿಸಲು ಉದ್ದೇಶಿಸಿರುವ ಎಲ್ಲ ಆಚರಣೆಗಳ ಬಗ್ಗೆ ಮತ್ತಷ್ಟು ಚರ್ಚೆಗಳು ನಡೆಯಬೇಕು. ಇಲ್ಲದಿದ್ದರೆ, ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಸಚಿವ ಸಂಪುಟದಲ್ಲಿ ಹಿರಿಯ ಸದಸ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಡಿವೈಎಸ್ಪಿ ಗಣಪತಿ ಹಾಗೂ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆಯಿಂದ ರಾಜ್ಯದಲ್ಲಿ ಸರಕಾರದ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಕಾನೂನು ಜಾರಿಗೆ ತರಲು ಮುಂದಾದರೆ ಜನರಿಂದ ಮತ್ತಷ್ಟು ವಿರೋಧ ವ್ಯಕ್ತವಾಗಬಹುದು ಎಂದು ಕೆಲವು ಸಚಿವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.







