ಝೆಕ್ ಗಣರಾಜ್ಯದ ಗೋಲ್‌ಕೀಪರ್ ಪೀಟರ್ ಸೆಕ್ ನಿವೃತ್ತಿ

ಪರಾಗ್ವೆ, ಜು.8: ಝೆಕ್ ಗಣರಾಜ್ಯದ ಗೋಲ್‌ಕೀಪರ್ ಪೀಟರ್ ಸೆಕ್ ಶುಕ್ರವಾರ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಝೆಕ್ ತಂಡ ಯುರೋ ಕಪ್‌ನಿಂದ ಬೇಗನೆ ಹೊರ ಬಿದ್ದ ಕಾರಣ ಸೆಕ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ನಾನು ಪ್ರೀಮಿಯರ್ ಲೀಗ್ ಕ್ಲಬ್ ಅರ್ಸೆನಲ್ ಪರ ಸಂಪೂರ್ಣ ಗಮನ ನೀಡಲು ಬಯಸಿದ್ದೇನೆ. ನಾನು ಚಿಕ್ಕವನಿದ್ದಾಗ ಕನಿಷ್ಠ ಒಂದು ಬಾರಿಯಾದರೂ ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂಬ ಏಕೈಕ ಗುರಿ ಹೊಂದಿದ್ದೆ. ದೇಶದ ಪರ ಗರಿಷ್ಠ ಪಂದ್ಯಗಳಲ್ಲಿ ಆಡಿರುವುದಕ್ಕೆ ನಿಜವಾಗಿಯೂ ಹೆಮ್ಮೆಯಾಗುತ್ತಿದೆ ಎಂದು ನಿವೃತ್ತಿಯ ಬಳಿಕ ಸೆಕ್ ಹೇಳಿದ್ದಾರೆ.
34ರ ಹರೆಯದ ಸೆಕ್ 2002ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಕಾಲಿರಿಸಿದ್ದು, ಝೆಕ್ ಪರ ಗರಿಷ್ಠ ಪಂದ್ಯಗಳನ್ನು(124) ಆಡಿದ ಗೌರವ ಪಡೆದಿದ್ದಾರೆ. ಯುರೋ ಚಾಂಪಿಯನ್‌ಶಿಪ್‌ನ ಅಂತ್ಯಕ್ಕೆ ನಿವೃತ್ತಿಯಾಗುವೆನೆಂದು ಸೆಕ್ ಜೂನ್‌ನಲ್ಲಿ ಘೋಷಿಸಿದ್ದರು.
ಯುರೋ 2016ರಲ್ಲಿ ಝೆಕ್ ತಂಡ ಲೀಗ್ ಹಂತದಲ್ಲೇ ಹೊರ ನಡೆದ ಕಾರಣ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದಾರೆ. ಝೆಕ್ ತಂಡ ಯುರೋ ಕಪ್‌ನ ಡಿ ಗುಂಪಿನಲ್ಲಿ ಕೇವಲ 1 ಅಂಕವನ್ನು ಗಳಿಸಿತ್ತು.2004ರ ಯುರೋ ಚಾಂಪಿಯನ್‌ಶಿಪ್‌ನಲ್ಲಿ ಝೆಕ್ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿರುವುದು ಸೆಕ್ ವೃತ್ತಿಜೀವನದ ಹೈಲೈಟ್ ಆಗಿದೆ. 2004ರ ಬಳಿಕ ಪ್ರತಿ ಯುರೋ ಕಪ್‌ಗೆ ಝೆಕ್ ತಂಡ ಅರ್ಹತೆ ಪಡೆಯಲು ನೆರವಾಗಿದ್ದ ಸೆಕ್ 2006ರಲ್ಲಿ ಜರ್ಮನಿಯಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಆಡಿದ್ದರು.
ಸೆಕ್ ಝೆಕ್ ಗಣರಾಜ್ಯ ಮಾತ್ರವಲ್ಲ ಪ್ರೀಮಿಯರ್ ಲೀಗ್‌ನ ದೈತ್ಯ ತಂಡ ಚೆಲ್ಸಿ ತಂಡದ ಯಶಸ್ಸಿನಲ್ಲೂ ಪ್ರಮುಖ ಕಾಣಿಕೆ ನೀಡಿದ್ದಾರೆ. 2004ರ ಲಂಡನ್ ಕ್ಲಬ್ ಸೇರಿರುವ ಸೆಕ್ 486 ಪಂದ್ಯಗಳನ್ನು ಆಡಿದ್ದಾರೆ. 2015-16ರಲ್ಲಿ ಅರ್ಸೆನಲ್ ಕ್ಲಬ್‌ನ ಪರ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದರು.







