ಮದ್ದುಗುಂಡುಗಳ ಸಹಿತ ಇಬ್ಬರ ಸೆರೆ
ಕಾಸರಗೋಡು, ಜು.8: ನಾಡಕೋವಿಗೆ ಬಳಸುವ ಮದ್ದುಗುಂಡುಗಳ ಸಹಿತ ಇಬ್ಬರನ್ನು ಆದೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಡೂರಿನ ವಿಜಯ್ (29) ಮತ್ತು ಚೀನಾಡಿಯ ಭಾಸ್ಕರ (35) ಎಂದು ಗುರುತಿಸಲಾಗಿದೆ. ಐದು ಸಜೀವ ಮದ್ದುಗುಂಡುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಸುಳ್ಯ ಕಡೆಯಿಂದ ಅಡೂರಿಗೆ ಬರುತ್ತಿದ್ದ ಸ್ಕೂಟರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಮದ್ದುಗುಂಡುಗಳು ಪತ್ತೆಯಾಗಿದೆ. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು. ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ವಿಜಯ್ ಧರಿಸಿದ್ದ ವಸ್ತ್ರದಲ್ಲಿ ಮದ್ದುಗುಂಡುಗಳನ್ನು ಬಚ್ಚಿಡಲಾಗಿತ್ತು. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಪ್ರದೇಶದಲ್ಲಿ ನಕಲಿ ಬಂದೂಕು ತಯಾರಿಸುವ ಜಾಲವೇ ಕಾರ್ಯಾಚರಿಸುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.
ಕರ್ನಾಟಕದಿಂದ ಇದಕ್ಕೆ ಬೇಕಾದ ಪರಿಕರಗಳನ್ನು ಪೂರೈಕೆ ಮಾಡಲಾಗುತ್ತಿದ್ದು,ಈ ಜಾಲದ ಪತ್ತೆಗೆ ಪೊಲೀಸರ ಪ್ರಯತ್ನ ಮುಂದುವರಿದಿದೆ.
Next Story





