ಪ್ರಜ್ಞಾಸಿಂಗ್‌ಳನ್ನು ಭೇಟಿಯಾಗಿದ್ದುದಕ್ಕಾಗಿ ರಾಜನಾಥ್ ವಿರುದ್ಧ ದಿಗ್ವಿಜಯ್ ವಾಗ್ದಾಳಿ
ಹೊಸದಿಲ್ಲಿ, ಜು.8: ಖ್ಯಾತ ವಿದ್ವಾಂಸ ಡಾ. ಝಾಕಿರ್ ನಾಯ್ಕಾರೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕಾಗಿ ತನ್ನತ್ತ ಗುರಿಯಿಟ್ಟಿರುವ ಬಿಜೆಪಿಗೆ ತಿರುಗುಬಾಣ ಬಿಟ್ಟಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, 2008ರ ಮಾಲೆಗಾಂವ್ ಸ್ಫೋಟ ಆರೋಪಿ ಪ್ರಜ್ಞಾಸಿಂಗ್ ಠಾಕೂರ್‌ಳನ್ನು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಭೇಟಿ ಮಾಡಿದ್ದರೆಂಬ ಆರೋಪವನ್ನು ಎತ್ತಿದ್ದಾರೆ.
ಶ್ರೀ ರವಿಶಂಕರ್ ಅವರು, ಝಾಕಿರ್ ನಾಯ್ಕ ರೊಡನೆ ವೇದಿಕೆ ಹಂಚಿಕೊಂಡುದರ ಬಗ್ಗೆ ಆಡಳಿತ ಪಕ್ಷ ಏನು ಹೇಳುತ್ತದೆಂದು ಅವರು ಪ್ರಶ್ನಿಸಿದ್ದಾರೆ.
ಝಾಕಿರ್ ನಾಯ್ಕರೊಂದಿಗೆ ವೇದಿಕೆ ಹಂಚಿಕೊಂಡುದಕ್ಕಾಗಿ ತನ್ನನ್ನು ಟೀಕಿಸಲಾಗುತ್ತಿದೆ. ಆದರೆ, ರಾಜನಾಥ್ ಸಿಂಗ್ ಜೀ, ಬಾಂಬ್ ಸ್ಫೋಟ ಆರೋಪಿ ಪ್ರಜ್ಞಾ ಠಾಕೂರ್‌ಳನ್ನು ಭೇಟಿಯಾಗಿರುವ ಬಗ್ಗೆ ಏನೆನ್ನಬೇಕು. ಪ್ರಜ್ಞಾ ಬಾಂಬ್ ಸ್ಫೋಟದ ಆರೋಪಿಯಾಗಿದ್ದಾಳೆ. ಆದರೆ, ಝಾಕಿರ್ ನಾಯ್ಕಾರ ವಿರುದ್ಧ ಪ್ರಕರಣವಿದೆಯೇ? ಶ್ರೀ ರವಿಶಂಕರ್ ಗುರೂಜಿ, ನಾಯ್ಕಾ ರೊಂದಿಗೆ ವೇದಿಕೆ ಹಂಚಿಕೊಂಡ ಬಗ್ಗೆ ಏನು ಹೇಳುತ್ತೀರಿ? ಎಂದು ದಿಗ್ವಿಜಯ್ ಸರಣಿ ಟ್ವೀಟ್‌ಗಳಲ್ಲಿ ಕೇಳಿದ್ದಾರೆ.
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ರಾಜನಾಥ್ ಕಾರಾಗೃಹದಲ್ಲಿ ಪ್ರಜ್ಞಾಳನ್ನು ಭೇಟಿಯಾಗಿದ್ದರೆಂದು ಅವರು ಈ ಹಿಂದೆಯೂ ಆರೋಪಿಸಿದ್ದರು. ಈಗ ಕೇಂದ್ರ ಗೃಹಸಚಿವರಾಗಿರುವ ರಾಜನಾಥ್, ಅಂದು ತಾನು ಪ್ರಜ್ಞಾಳನ್ನು ಭೇಟಿಯಾಗಿರುವುದನ್ನು ನಿರಾಕರಿಸಿದ್ದರು.
ದಿಗ್ವಿಜಯ್, ಝಾಕಿರ್‌ರನ್ನು ಹೊಗಳುತ್ತಿರುವ 2012ರ ವೀಡಿಯೊ ಒಂದು ಬಹಿರಂಗಕ್ಕೆ ಬಂದ ಬಳಿಕ, ಬಿಜೆಪಿ ಅವರತ್ತ ತನ್ನ ಬಂದೂಕನ್ನು ತಿರುಗಿಸಿದೆ. ಬಾಂಗ್ಲಾದೇಶದಲ್ಲಿ ದಾಳಿ ನಡೆಸಿದ್ದ ಭಯೋತ್ಪಾದಕನೊಬ್ಬ, ತಮಗೆ ಝಾಕಿರ್ ನಾಯ್ಕಾ ಸ್ಫೂರ್ತಿ ಎಂದು ಬಹಿರಂಗಪಡಿಸಿದ ಬಳಿಕ ನಾಯ್ಕಾ ಸರಕಾರದ ಹದ್ದುಗಣ್ಣಲಿದ್ದಾರೆ.





