ಸರಕಾರದಿಂದ ಝಾಕಿರ್ ನಾಯ್ಕ ಭಾಷಣ ಪರಿಶೀಲನೆ: ರಾಜನಾಥ್
ಹೊಸದಿಲ್ಲಿ, ಜು.8: ಖ್ಯಾತ ವಿದ್ವಾಂಸ ಡಾ. ಝಾಕಿರ್ ನಾಯ್ಕಾರ ಭಾಷಣಗಳನ್ನು ಸರಕಾರವು ಪರಿಶೀಲಿಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆಯೆಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಇಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಜು.1ರಂದು ಪ್ರಖ್ಯಾತ ಕೆಫೆ ಒಂದರಲ್ಲಿ ಒಬ್ಬಾಕೆ ಭಾರತೀಯಳ ಸಹಿತ 20 ಮಂದಿ ಒತ್ತೆಯಾಳುಗಳ ಬರ್ಬರ ಹತ್ಯೆ ನಡೆಸಿದ್ದ ಐವರು ಯುವ ಭಯೋತ್ಪಾದಕರಲ್ಲಿಬ್ಬರು, ನಾಯ್ಕಾರ ಭಾಷಣಗಳಿಂದ ಸ್ಫೂರ್ತಿ ಪಡೆದಿದ್ದರೆಂಬ ವರದಿಗಳ ಹಿನ್ನಲೆಯಲ್ಲಿ ಝಾಕಿರ್ ನಾಯ್ಕಾರ ಮೇಲೆ ಹದ್ದುಗಣ್ಣಿರಿಸಲಾಗಿದೆ.
ತಾವು ಝಾಕಿರ್ ನಾಯ್ಕರ ಭಾಷಣಗಳನ್ನು ಪರಿಗಣಿಸಿದ್ದೇವೆ. ಈ ಸಂಬಂಧ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಅವರ ಭಾಷಣಗಳು ಹಾಗೂ ಸಿಡಿಗಳನ್ನು ಪರಿಶೀಲಿಸಲಾಗುತ್ತಿದೆ. ಸಮರ್ಥನೀಯವಾದ ಎಲ್ಲವನ್ನೂ ಮಾಡಲಾಗುವುದೆಂದು ರಾಜನಾಥ್ ದಿಲ್ಲಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ಭಾರತ ಸರಕಾರವು ಯಾವುದೇ ಬೆಲೆ ತೆತ್ತಾದರೂ ಭಯೋತ್ಪಾದನೆಯೊಂದಿಗೆ ರಾಜಿ ಮಾಡಿಕೊಳ್ಳದೆಂದು ಅವರು ಹೇಳಿದರು.
ಮುಂಬೈಯ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕ ಝಾಕಿರ್ ನಾಯ್ಕಾರನ್ನು ಇತರ ಧರ್ಮಗಳನ್ನು ಗುರಿಯಿರಿಸಿ ದ್ವೇಷ ಭಾಷಣಗಳನ್ನು ಮಾಡಿದುದಕ್ಕಾಗಿ ಬ್ರಿಟನ್ ಹಾಗೂ ಕೆನಡಾಗಳು ನಿಷೇಧಿಸಿವೆ.





